ಬಿಸಿಯೂಟ ತಿಂದು ಪರೀಕ್ಷಿಸಿ, ನಂತರ ಮಕ್ಕಳಿಗೆ ನೀಡಿ: ನಿತೀಶ್
ಮಧ್ಯಾಹ್ನದ ಬಿಸಿಯೂಟದ ಬಿಸಿ ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ ತಟ್ಟಿದ್ದು,
ಪಾಟ್ನಾ: ಮಧ್ಯಾಹ್ನದ ಬಿಸಿಯೂಟದ ಬಿಸಿ ಈಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ ತಟ್ಟಿದ್ದು, ಮಕ್ಕಳಿಗೆ ಬಿಸಿಯೂಟ ನೀಡುವ ಮುನ್ನ ಅದನ್ನು ಮೊದಲು ನೀವು ತಿಂದು ಪರೀಕ್ಷಿಸಿದ ನಂತರ ಮಕ್ಕಳಿಗೆ ನೀಡುವಂತೆ ಶಾಲಾ ಶಿಕ್ಷಕರಿಗೆ ಸೂಚಿಸಿದ್ದಾರೆ.
ಬಿಹಾರ ಸಾರನ್ ಜಿಲ್ಲೆಯ ಛಪ್ರಾದ ಶಾಲೆಯೊಂದರಲ್ಲಿ ಬಿಸಿಯೂಟ ಸೇವಿಸಿ 22 ಮಕ್ಕಳು ಮೃತಪಟ್ಟ ದುರಂತದಿಂದ ಎಚ್ಚೆತ್ತುಕೊಂಡಿರುವ ಬಿಹಾರ ಸರ್ಕಾರ, ಈಗ ಮುಂಜಾಗ್ರತ ಕ್ರಮಕ್ಕೆ ಮುಂದಾಗಿದೆ.
ಶಾಲೆಗಳಲ್ಲಿ ಮಕ್ಕಳಿಗಾಗಿ ತಯಾರಿಸಿದ ಬಿಸಿಯೂಟವನ್ನು ಶಾಲೆಯ ಶಿಕ್ಷಕರು ಅಥವಾ ಆಹಾರ ತಯಾರಿಸುವ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟವನ್ನು ಮೊದಲು ತಾವು ತಿಂದು ಪರೀಕ್ಷಿಸದ ನಂತರ ಮಕ್ಕಳಿಗೆ ಬಡಿಸುವಂತೆ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಮೂಲಕ ಶಾಲೆಯ ಪ್ರಾಧ್ಯಾಪಕರಿಗೆ ಸರ್ಕಾರ ಸೂಚಿಸಿದೆ.
ಬಿಸಿಯೂಟ ತಯಾರಿಸುವ ಸಂದರ್ಭದಲ್ಲಿ ಆಡಳಿತ ಶಿಕ್ಷಣ ಮಂಡಳಿ ಕಡ್ಡಾಯವಾಗಿ ಪರೀಕ್ಷಿಸುವಂತೆ ಆದೇಶಿಸಿದೆ. ಅಲ್ಲದೆ ತಯಾರಾಗಿರುವ ಬಿಸಿಯೂಟವನ್ನು ಅಗತ್ಯವಾಗಿ ಪರೀಕ್ಷಿಸುವಂತೆ ಸರ್ಕಾರ ಸೂಚಿಸಿದೆ. ಜೊತೆಗೆ ಬಿಸಿಯೂಟ ಬಡಿಸುವ ಸ್ಥಳದಲ್ಲಿ ಆಹಾರ ಪದಾರ್ಥಗಳು ಹಾಗೂ ಕೀಟನಾಶಕಗಳನ್ನು ಸಂಗ್ರಹಿಸುವಂತಿಲ್ಲ. ಇಂತಹ ಕ್ರಮಗಳನ್ನು ಕೈಗೊಂಡಾಗ ಮಾತ್ರ ದುರಂತಗಳು ಸಂಭವಿಸದಂತೆ ನೋಡಿಕ್ಕೊಳ್ಳಲು ಸಾಧ್ಯವಾಗುತ್ತದೆ ಎಂದು ನಿತೀಶ್ ತಿಳಿಸಿದ್ದಾರೆ.
ನಿನ್ನೆ ಬಿಹಾರದ ಸಾರನ್ ಜಿಲ್ಲೆಯ ಛಪ್ರಾದ ಶಾಲೆಯೊಂದರಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವನೆಯಿಂದ ಮೃತಪಟ್ಟ ಮಕ್ಕಳ ಸಂಖ್ಯೆ ಗುರುವಾರ 23ಕ್ಕೆ ಏರಿದೆ. ಅಲ್ಲದೆ ಬಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ 30 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.