ಮೋದಿ ಒಬ್ಬ ಜಾತಿವಾದಿ ಎಂದು ಹೇಳಿಲ್ಲ: ಹಜಾರೆ
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಒಬ್ಬ ಜಾತಿವಾದಿ ಎಂದು ನಾನು ಹೇಳಿಲ್ಲ ಎಂದು ಸಮಾಜ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಒಬ್ಬ ಜಾತಿವಾದಿ ಎಂದು ನಾನು ಎಲ್ಲೂ ಯಾವ ಹೇಳಿಕೆಯನ್ನು ನೀಡಿಲ್ಲ. ಮೋದಿ ಜಾತಿವಾದಿ ಎಂಬುದು ಬಿಜೆಪಿಯ ಅಜೆಂಡಾವಾಗಿದೆ ಎಂದರು. ಇದೇ ವೇಳೆ, ದೇಶದ ರಾಜಕೀಯ ಪಕ್ಷಗಳಲ್ಲಿ ಸೂಕ್ತ ಪ್ರಧಾನಿ ಅಭ್ಯರ್ಥಿ ಯಾರು ಇಲ್ಲ. ರಾಷ್ಟ್ರವನ್ನು ಸಮರ್ಥವಾಗಿ ಆಳುವಂತ ಅಭ್ಯರ್ಥಿಯ ಕೊರತೆ ಇದೆ ಎಂದು ಹೇಳಿದರು.
ಕಳೆದ ಎರಡು ದಿನಗಳ ಹಿಂದೆ ನಡೆದ ಅಕ್ರಮ ಸಂಪಾದನೆ ವಿರುದ್ದ ಸಮರ ಚಳುವಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ಮೋದಿ ಒಬ್ಬ ಜಾತಿವಾದಿ ಎಂದು ಹೇಳುವುದಕ್ಕೆ ಯಾವುದೇ ಪೂರಾವೆಗಳು ಇಲ್ಲ ಎಂದು ಹೇಳಿದ್ದಾಗಿ ಹಜಾರೆ ಸ್ಪಷ್ಟಪಡಿಸಿದ್ದಾರೆ.
ಭ್ರಷ್ಟಾಚಾರ ವಿರೋಧಿ ಚಳುವಳಿಗಳಲ್ಲಿ ತಮ್ಮ ಜೊತೆ ಗುರುತಿಸಿಕೊಂಡಿರುವ ಅರವಿಂದ್ ಕೇಜ್ರಿವಾಲ್ ಅವರ ಅಮ್ ಆದ್ಮಿ ಪಕ್ಷವನ್ನು ತಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆಗಲಿ ಅಥವಾ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿಯಾಗಿ ಯಾರೇ ಆಯ್ಕೆಯಾದರು ಸರಿ. ದೇಶಕ್ಕೆ ಒಬ್ಬ ಉತ್ತಮ ನಾಯಕ ಸಿಕ್ಕರೆ ಸಾಕು ಎಂದು ಅವರು ಹೇಳಿದ್ದಾರೆ.