ಮೋದಿ ಮೇಲೆ ಮುನಿಸು, ಬಿಜೆಪಿಯಲ್ಲಿ ರಾಷ್ಟ್ರೀಯ ನಾಯಕರಿಲ್ಲ: ಠಾಕ್ರೆ
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಎನ್ಡಿಎ ಅಂಗ ಪಕ್ಷ ಶಿವಸೇನೆ, ಬಿಜೆಪಿಯಲ್ಲಿ 'ರಾಷ್ಟ್ರೀಯ ನಾಯಕ' ಎನ್ನುವಂತಹ ವ್ಯಕ್ತಿಗಳು ಇಲ್ಲ ಎಂದು ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಶುಕ್ರವಾರ ಹೇಳಿದ್ದಾರೆ.
ನೇರವಾಗಿ ಎನ್ಡಿಎ ಪ್ರಧಾನಿ ಅಭ್ಯರ್ಥಿಯಾರಾಗಬೇಕು ಎಂಬುದನ್ನು ತಿಳಿಸಿಲು ನಿರಾಕರಿಸಿದ ಠಾಕ್ರೆ, 2014ರ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ವ್ಯಕ್ತಿಯನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ 'ರಾಷ್ಟ್ರೀಯ ನಾಯಕ' ಎನ್ನುವಂತವರು ಯಾರು ಇಲ್ಲ ಎಂದಿರುವ ಠಾಕ್ರೆ, ನಾನು ಹಿಂದು ರಾಷ್ಟ್ರವಾದಿ ಎಂದು ಹೇಳಿರುವ ಮೋದಿ ಅವರ ನಡೆ ಸರಿಯಾಗಿದೆ. ಹಿಂದುವಾಗಿ ಹುಟ್ಟಿರುವ ಅವರು ಹಿಂದು ಅಂತ ಹೇಳಿರುವುದರಲ್ಲಿ ತಪ್ಪೇನು ಇಲ್ಲ ಎಂದಿದ್ದಾರೆ.
ಮೋದಿ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಜಾತ್ಯಾತೀತತೆಯ ಆಧಾರದ ಮೇಲೆ ಎನ್ಡಿಎದಿಂದ ಹೊರಬಂದಿರುವ ಬಿಹಾರ ಮುಖ್ಯಮಂತ್ರಿ ನಿರ್ಧಾರ ಸರಿಯಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.
ಈ ಮುಂಚೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರೇ ಸೂಕ್ತ ಎಂದು ಶಿವಸೇನೆ ಬಹಿರಂಗವಾಗಿ ಹೇಳಿಕೊಂಡಿತ್ತು. ಆದರೆ ಇದೀಗ ತನ್ನ ವರಸೆ ಬದಲಿಸಿರುವ ಶಿವಸೇನೆ ಮುಂದಿನ ದಿನಗಳಲ್ಲಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದೆ.