ಬಿಸಿಯೂಟ ದುರಂತ; ಸಾಮೂಹಿಕ ಹೊಣೆಗಾರಿಕೆಯ ಅಗತ್ಯ ಇದೆ: ಕೇಂದ್ರ
ನವದೆಹಲಿ: ಬಿಸಿಯೂಟ ದುರಂತ ಸಂಬಂಧ ಬಿಹಾರ ಸರ್ಕಾರ ಹಾಗೂ ಕೇಂದ್ರದ ನಡುವಿನ ಕೇಸರೇರಾಚಾಟದ ನಡುವೆಯೇ, ದುರಂತ ಸಂಬಂಧ ಸಾಮೂಹಿಕ ಹೊಣೆಗಾರಿಕೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಪಲ್ಲಂ ರಾಜು ಅವರು ಶನಿವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ರಾಜ್ಯ ಸರ್ಕಾರಗಳ ಜವಾಬ್ದಾರಿಯೂ ಇರುತ್ತದೆ. ಅಲ್ಲದೆ ಇಂತಹ ಯೋಜನೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಮಿತಿಗಳನ್ನು ರಚಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಲ್ಲಂ ರಾಜು, ಕೇಂದ್ರದ ಯೋಜನೆಗಳನ್ನು ಕಾರ್ಯಗತಗೊಳಿಸುವ ಮುನ್ನ ಅದರ ಸಾಧಕಬಾಧಕಗಳನ್ನು ಪರಿಶೀಲಿಸಬೇಕು. ಯಾವುದೇ ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸುವ ಅಗತ್ಯವಿದೆ ಎಂದರು.
ಬಿಹಾರ ಬಿಸಿಯೂಟ ದುರಂತ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರನ್ ಜಿಲ್ಲಾಡಳಿತದಿಂದ ವರದಿ ಬಂದಿದೆ. ಆದರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದು, ವರದಿ ಬಂದ ನಂತರ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ ಎಂದು ಹೇಳಿದರು.