ಮಾಜಿ ಕೇಂದ್ರ ಸಚಿವ ಖುರ್ಷಿದ್ ನಿಧನ
ನವದೆಹಲಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕರ್ನಾಟಕದ ಮಾಜಿ ರಾಜ್ಯಪಾಲ ಹಾಗೂ ಕೇಂದ್ರದ ಮಾಜಿ ಸಚಿವ ಖುರ್ಷಿದ್ ಆಲಂ ಖಾನ್ ಅವರು ಶನಿವಾರ ಮುಂಜಾನೆ ನಿಧನರಾದರು.
ಉತ್ತರ ಪ್ರದೇಶದ ಫಾರೂಕಾಬಾದ್ ಜಿಲ್ಲೆಯವರಾದ ಖುರ್ಷಿದ್ ಖಾನ್ ಅವರಿಗೆ (95) ವರ್ಷ ವಯಸ್ಸಾಗಿತ್ತು. ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಆರು ದಿನಗಳ ಹಿಂದೆ ಎಸ್ಕಾರ್ಟ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಖುರ್ಷಿದ್ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ರಾಷ್ಟ್ರವು ಒಬ್ಬ ಪ್ರಾಮಾಣಿಕ ಸೇನಾನಿಯನ್ನು ಕಳೆದುಕೊಂಡಿದೆ. ಅಲ್ಲದೆ ಖಾನ್ ಅವರು ತಮ್ಮ ಜೀವನವನ್ನು ದೇಶದ ಸಮಗ್ರ ಅಭಿವೃದ್ದಿಗಾಗಿ ಮೀಸಲಿಟ್ಟಿದ್ದರು ಎಂದು ಹೇಳಿದರು.
ಖಾನ್ ಅವರು 1989 ರಿಂದ 1991ರ ವರೆಗೆ ಗೋವಾದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಆ ನಂತರ 1991 ರಿಂದ 1999ರ ವರೆಗೂ ಕರ್ನಾಟಕದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಖುರ್ಷಿದ್ ಅವರು, ದಿವಂಗತ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಸಂಪುಟದಲ್ಲಿಯೂ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.