ಛತ್ತೀಸ್ಗಡ್ ಸಹಕಾರಿ ಬ್ಯಾಂಕ್ ಹಗರಣ: ಸಿಡಿ ಬಿಡುಗಡೆ
ಛತ್ತೀಸ್ಗಡ್ದಲ್ಲಿ ಏಳು ವರ್ಷದ ಹಿಂದೆ ನಡೆದಿದ್ದ ಇಂದಿರಾ ಪ್ರಿಯದರ್ಶಿನಿ ಮಹಿಳಾ ನಾಗರಿಕ ಸಹಕಾರಿ ಬ್ಯಾಂಕ್...
ರಾಯ್ಪುರ: ಛತ್ತೀಸ್ಗಡ್ದಲ್ಲಿ ಏಳು ವರ್ಷದ ಹಿಂದೆ ನಡೆದಿದ್ದ ಇಂದಿರಾ ಪ್ರಿಯದರ್ಶಿನಿ ಮಹಿಳಾ ನಾಗರಿಕ ಸಹಕಾರಿ ಬ್ಯಾಂಕ್ ಹಗರಣಕ್ಕೆ ಇದೀಗ ಪುನರ್ ಜೀವ ಬಂದಿದೆ.
ಛತ್ತೀಸ್ಗಡ್ನ ಮುಖ್ಯಮಂತ್ರಿ ರಮನ್ ಸಿಂಗ್ ಹಾಗೂ ಅವರ ಸಂಪುಟ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಿಡಿಯೊಂದನ್ನ ಭಾನುವಾರ ಬಿಡುಗಡೆ ಮಾಡಿದೆ.
ಪ್ರಕರಣದ ಮುಖ್ಯ ಆರೋಪಿ ಉಮೇಶ್ ಸಿನ್ಹಾರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಚಿತ್ರಿಕರಿಸಲಾಗಿದ್ದ ಸಿಡಿಯ ಪ್ರತಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಛತ್ತೀಸ್ಗಡ ಪ್ರದೇಶ ಕಾಂಗ್ರೆಸ್ ಸಮಿತಿ(ಪಿಸಿಸಿ)ಯ ವಕ್ತಾರ ಶೈಲೇಶ್ ನಿತೀನ್ ತ್ರಿವೇದಿ ಹಾಗೂ ಕಾರ್ಯಕ್ರಮ ಸಂಯೋಜಕ ಬುಪೇಶ್ ಬಾಂಗೆಲ್ ಅವರು, ಕಾಂಗ್ರೆಸ್ ಭವನದಲ್ಲಿ ಇಂದು ಸಿಡಿ ಬಿಡುಗಡೆ ಮಾಡಿದರು. ವಿಚಾರಣೆ ವೇಳೆ ಮುಖ್ಯಮಂತ್ರಿ ಹಾಗೂ ಸಂಪುಟ ಸಚಿವರಿಗೆ ಬ್ಯಾಂಕ್ ಅಧಿಕಾರಿಗಳು ಭಾರಿ ಮೊತ್ತದ ಹಣವನ್ನು ನೀಡಿದ್ದಾರೆ ಎಂದು ಸಿನ್ಹಾ ನೀಡಿರುವ ಹೇಳಿಕೆ ಇರುವುದಾಗಿ ಬುಪೇಶ್ ತಿಳಿಸಿದರು.
ಹಗರಣ ಸಂಬಂಧ ಪಿಸಿಸಿ ಮುಖ್ಯಸ್ಥ ನಂದ ಕುಮಾರ್ ಪಟೇಲ್ ಪುತ್ರ ದಿನೇಶ್ ಪಟೇಲ್ ಅವರು, ಕಳೆದ ಜೂನ್ನಲ್ಲಿ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದರು. ಆದರೆ ದುರಾದೃಷ್ಟವಶಾತ ದರ್ಬ್ನಲ್ಲಿ ನಡೆದ ದಾಳಿಯಲ್ಲಿ ನಕ್ಸಲರು ದಿನೇಶ್ರನ್ನು ನಿರ್ಧಾಕ್ಷಿಣ್ಯವಾಗಿ ಹತ್ಯೆ ಮಾಡಿದ್ದರು ಎಂದು ತಿಳಿಸಿದರು.
2006ರಲ್ಲಿ ನಡೆದಿದ್ದ ಬಹುಕೋಟಿ ಹಗರಣ ಬಹಿರಂಗಗೊಳ್ಳುತ್ತಿದಂತೆ ಬ್ಯಾಂಕ್ನ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಸಿನ್ಹಾ ಸೇರಿದಂತೆ ಬ್ಯಾಂಕ್ನ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದರು.