ಶಕೀಲ್ ಐಎಂ ವಕ್ತಾರರಂತೆ ವರ್ತಿಸುತ್ತಿದ್ದಾರೆ: ಆರ್ಎಸ್ಎಸ್
ವಾಷಿಂಗ್ಟನ್: ಕಾಂಗ್ರೆಸ್ ಮುಖಂಡ ಶಕೀಲ್ ಅಹಮದ್ ಅವರು ಇಂಡಿಯನ್ ಮುಜಾಹಿದ್ದೀನ್(ಐಎಂ) ವಕ್ತಾರರಂತೆ ವರ್ತಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ಸೋಮವಾರ ಹೇಳಿದೆ.
ಗುಜರಾತ್ ಗಲಭೆಯೇ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹುಟ್ಟಿಕೊಳ್ಳಲು ಕಾರಣ ಎಂದು ಶಕೀಲ್ ಅವರು ವಿವಾದಾತ್ಮಕ ಹೇಳಿಕೆ ನೀಡಿ ಆರ್ಎಸ್ಎಸ್ ಮತ್ತು ಭಾರತೀಯ ಜನತಾ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು.
ಶಕೀಲ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಆರ್ಎಸ್ಎಸ್ನ ಮುಖಂಡ ರಾಮ್ ಮಹಾದೇವ್, ಶಕೀಲ್ ಅವರು ಐಎಂ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಇಂತಹ ರಾಜಕಾರಿಣಿಗಳಿರುವುದರಿಂದಲೇ ಐಎಂ ನಂತಹ ಉಗ್ರ ಸಂಘಟನೆಗಳು ತಲೆ ಎತ್ತುತ್ತಿರುವುದು. ಶಕೀಲ್ ಅವರು ಪರೋಕ್ಷವಾಗಿ ಐಎಂ ಸಂಘಟನೆಗೆ ಬೆಂಬಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಮತ್ತು ಬಿಜೆಪಿ ದೇಶದಲ್ಲಿ ಕೋಮು ಸಾಮರಸ್ಯ ಕದಡದಿರಲಿ, ಇನ್ನಾದರೂ ಬುದ್ಧಿಕಲಿತುಕೊಳ್ಳಲಿ. ಐಎಂ ಹುಟ್ಟಿಕೊಂಡದ್ದೇ 2002ರ ಗುಜರಾತ್ ಗಲಭೆ ಬಳಿಕ. ಹೀಗಂತ ರಾಷ್ಟ್ರೀಯ ತನಿಖಾ ಸಂಸ್ಥೆ ದೆಹಲಿ ಕೋರ್ಟ್ ಸ್ಫೋಟದ ಆರೋಪ ಪಟ್ಟಿಯಲ್ಲಿ ಹೇಳಿದೆ ಎಂದು ಅಹಮದ್ ಶಕೀಲ್ ಹೇಳಿದ್ದರು.