ಬಿಸಿಯೂಟ ದುರಂತದ ಹಿಂದೆ ಪಿತೂರಿ ಇದೆ: ನಿತೀಶ್
23 ವಿದ್ಯಾರ್ಥಿಗಳನ್ನು ಬಲಿ ಪಡೆದ ಛಪ್ರಾದ ಬಿಸಿಯೂಟ ದುರಂತ ಪ್ರಕರಣದ ಬಗ್ಗೆ ಮೌನ ಮುರಿದಿರುವ ಬಿಹಾರ ಮುಖ್ಯಮಂತ್ರಿ..
ಪಾಟ್ನಾ: 23 ವಿದ್ಯಾರ್ಥಿಗಳನ್ನು ಬಲಿ ಪಡೆದ ಛಪ್ರಾದ ಬಿಸಿಯೂಟ ದುರಂತ ಪ್ರಕರಣದ ಬಗ್ಗೆ ಮೌನ ಮುರಿದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ದುರಂತದ ಹಿಂದೆ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಘಟನೆಯಿಂದ ರಾಜಕೀಯ ಲಾಭ ಪಡೆಯಲು ಪ್ರತಿಪಕ್ಷ ಬಿಜೆಪಿ ಹಾಗೂ ಆರ್ಜೆಡಿ 'ಒಳ್ಳ ಒಪ್ಪಂದ' ಮಾಡಿಕೊಂಡಿವೆ ಎಂದು ದೂರಿದ್ದಾರೆ.
2014ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಸದರ, ಶಾಸಕರ ಹಾಗೂ ಪದಾಧಿಕಾರಿಳ ಸಭೆಯಲ್ಲಿ ಮಾತನಾಡಿದ ಬಿಹಾರ ಸಿಎಂ, ಛಪ್ರಾ ಜಿಲ್ಲೆಯ ಧರ್ಮಸ್ತಿ ಗಂಡಮಾನ್ನ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಿಸಿಯೂಟ ದುರಂತಕ್ಕೆ ಅಡುಗೆ ಎಣ್ಣೆಯಲ್ಲಿನ ಮೋನೋಕ್ರೊಟೋಫಾಸ್ ಎಂಬ ಕೀಟನಾಶಕವೇ ಕಾರಣ ಎಂದು ವಿಧಿವಿಜ್ಞಾನ ಪ್ರಯೋಗಾಲದ ವರದಿ ಹೇಳಿದೆ. ಇದನ್ನು ಗಮನಿಸಿದರೆ ಘಟನೆಯ ಹಿಂದೆ ರಾಜಕೀಯ ಪಿತೂರಿ ಇದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಬೋಧಗಯಾ ಸ್ಫೋಟ ಮತ್ತು ಬಿಸಿಯೂಟ ದುರಂತದ ಬಗ್ಗೆ ಬಿಜೆಪಿ ಮತ್ತು ಆರ್ಜೆಡಿ ಮಧ್ಯೆ ಒಳ ಒಪ್ಪಂದವಾಗಿದ್ದು, ಘಟನೆಗಳ ನಂತರ ಎರಡೂ ಪಕ್ಷಗಳು ಬಂದ್ಗೆ ಕರೆ ನೀಡಿದ್ದವು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಈ ಎರಡೂ ಘಟನೆಗಳ ನಂತರ ಬಿಜೆಪಿ ಮತ್ತು ಆರ್ಜೆಡಿ ಬಂದ್ ಕರೆ ನೀಡಿದ್ದನ್ನು ನೋಡಿದರೆ, ಅವರ ಮಧ್ಯೆ ಒಳ ಒಪ್ಪಂದವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಬಿಹಾರ ಸಿಎಂ ತಿಳಿಸಿದರು.