ಬಿಹಾರ ಬಿಸಿಯೂಟ ದುರಂತದ ತನಿಖೆಗೆ ಎಸ್‌ಐಟಿ
ಛಪ್ರಾದ ಬಿಸಿಯೂಟ ದುರಂತ ಪ್ರಕರಣದ ತನಿಖೆಗೆ ಬಿಹಾರ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿದ್ದು,.
ಪಾಟ್ನಾ: ಛಪ್ರಾದ ಬಿಸಿಯೂಟ ದುರಂತ ಪ್ರಕರಣದ ತನಿಖೆಗೆ ಬಿಹಾರ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಿದ್ದು, ಮಂಗಳವಾರದಿಂದ ತನಿಖೆ ಆರಂಭಗೊಂಡಿದೆ.
ಸರನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ಕುಮಾರ್ ನೇತೃತ್ವದಲ್ಲಿ 8 ಸದಸ್ಯರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಸರನ್ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮಹಾ ನಿರ್ದೇಶಕ(ಸಿಐಡಿ) ವಿನಯ್ ಕುಮಾರ್ ಅವರು ಎಸ್‌ಐಟಿಯ ಮೇಲುಸ್ತುವಾರಿ ವಹಿಸಿಕೊಂಡಿದ್ದು, ಪೊಲೀಸ್ ಮಹಾ ನಿರ್ದೇಶಕ(ಕಾರ್ಯಾಚರಣೆ) ಅಮಿತ್ ಕುಮಾರ್ ಅವರು ತನಿಖೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಲೆಮರೆಸಿಕೊಂಡಿರುವ ಛಪ್ರಾ ಶಾಲೆಯ ಮುಖ್ಯೋಪಾಧ್ಯಾಯಿನಿ ಮೀನಾ ದೇವಿ ಅವರ ಬಂಧನಕ್ಕೆ ಎಸ್‌ಐಟಿ ಬಲೆ ಬೀಸಿದೆ ಎಂದು ಅವರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮೀನಾ ದೇವಿ ಅವರ ವಿರುದ್ಧ ನಿನ್ನೆ ಸ್ಥಳೀಯ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಕಳೆದ ವಾರ ಛಪ್ರಾ ಜಿಲ್ಲೆಯ ಧರ್ಮಸ್ತಿ ಗಂಡಮಾನ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ದುರಂತಕ್ಕೆ ಅಡುಗೆ ಎಣ್ಣೆಯಲ್ಲಿನ ಮೋನೋಕ್ರೊಟೋಫಾಸ್ ಎಂಬ ಕೀಟನಾಶಕವೇ ಕಾರಣ ಎಂದು ವಿಧಿವಿಜ್ಞಾನ ಪ್ರಯೋಗಾಲದ ವರದಿ ಹೇಳಿದೆ.