ಸೋನಿಯಾ ಭೇಟಿ ಮಾಡಿದ ಶಕೀಲ್ ಅಹ್ಮದ್
2001ರ ಗುಜರಾತ್ ಗಲಭೆಯೇ ಉಗ್ರ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಹುಟ್ಟಿಕೊಳ್ಳಲು ಕಾರಣ ಎಂದು...
ನವದೆಹಲಿ: 2001ರ ಗುಜರಾತ್ ಗಲಭೆಯೇ ಉಗ್ರ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಹುಟ್ಟಿಕೊಳ್ಳಲು ಕಾರಣ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ಧ ಕಾಂಗ್ರೆಸ್ ನಾಯಕ ಶಕೀಲ್ ಅಹ್ಮದ್ ಮಂಗಳವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ಶಕೀಲ್ ಅಹ್ಮದ್‌ರ ಈ ಹೇಳಿಕೆಯಿಂದ ಕಾಂಗ್ರೆಸ್‌ಗೆ ಮುಖಭಂಗವುಂಟಾಗಿದ್ದು, ಆದ್ದರಿಂದಲೇ ಕಾಂಗ್ರೆಸ್, ಸೋನಿಯಾ ಅವರನ್ನು ಭೇಟಿಯಾಗುವಂತೆ ಶಕೀಲ್ ಅವರಿಗೆ ಕರೆ ನೀಡಿದೆ ಎಂದು ಹೇಳಲಾಗುತ್ತಿದೆ. ಅದೇ ವೇಳೆ ಶಕೀಲ್ ಅವರ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಪಕ್ಷದಲ್ಲಿರುವ ಹೆಚ್ಚಿನ ವ್ಯಕ್ತಿಗಳು ದೇಶದಲ್ಲಿ ಅಕ್ರಮವಾಗಿ ಉಗ್ರ ಸಂಘಟನೆಗಳು ಇರಬೇಕೆಂದು ಬಯಸುತ್ತಾರೆ. ಇದು ಸಾಮಾನ್ಯನೇನಲ್ಲ. ಈ ಹೇಳಿಕೆಯ ಬಗ್ಗೆ ಕಾಂಗ್ರೆಸ್ ವಿಷಾದಿಸುವುದಾದರೆ, ನಾವು ರಾಹುಲ್ ಗಾಂಧಿಯವರಿಂದಲೇ ಉತ್ತರ ಬಯಸುತ್ತೇವೆ ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ಆದಾಗ್ಯೂ, ಪಕ್ಷದ ಸೀಮಾರೇಖೆಯನ್ನು ಯಾರಾದರೂ ಉಲ್ಲಂಘಿಸಿದರೆ, ನಾವು ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ತಮ್ಮ ಕಾರ್ಯಕರ್ತರಿಗೆ ಸೋಮವಾರ ಎಚ್ಚರಿಕೆ ನೀಡಿದ್ದರು.
ಇತ್ತ ಶಕೀಲ್ ಅಹ್ಮದ್, ದೇಶಿಯ ತನಿಖಾ ಸಂಸ್ಥೆಯ ಪರಿಶೀಲನೆಯ ಬಗ್ಗೆ ದೇಶದ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಬಿಜೆಪಿ ವಕ್ತಾರರು ಯತ್ನಿಸುತ್ತಿದ್ದಾರೆ ಎಂದು ಶಕೀಲ್ ಅಹ್ಮದ್ ಮಂಗಳವಾರ ಟ್ವೀಟಿಸಿದ್ದಾರೆ.