ಅಮೆರಿಕ ವೀಸಾ ನಿರಾಕರಣೆಗೆ ಮೋದಿ ಕೋಮುವಾದ ಕಾರಣ: ಕಾಂಗ್ರೆಸ್
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನೀಡದಿರುವುದಕ್ಕೆ, ಅವರ ಕೋಮುವಾದಿ ನಿಲುವು..
ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ನೀಡದಿರುವುದಕ್ಕೆ, ಅವರ ಕೋಮುವಾದಿ ನಿಲುವು ಕಾರಣವಾಗಿರಬಹುದು ಎಂದು ಕಾಂಗ್ರೆಸ್ ನಾಯಕ ಜಗದಂಬಿಕ ಪಾಲ್ ಅವರು ಬುಧವಾರ ಹೇಳಿದ್ದಾರೆ.
ಮೋದಿ ವೀಸಾ ವಿವಾದಕ್ಕೆ ಪ್ರತಿಕ್ರಿಯಿಸಿರುವ ಪಾಲ್, 'ವೀಸಾ ನೀಡುವುದಕ್ಕೆ ಪ್ರತಿ ದೇಶ ತನ್ನದೇಯಾದ ನಿಯಮಗಳನ್ನು ಹೊಂದಿರುತ್ತದೆ. ಹಾಗೆಯೇ ಅಮೆರಿಕ ಸಹ ಮೋದಿ ಅವರಿಗೆ ವೀಸಾ ನೀಡದಿರುವುದಕ್ಕೆ ಅವರ ಕೋಮುವಾದಿ ನಿಲುವು ಕಾರಣವಾಗಿರಬಹುದು. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ್ದಾಗಲಿ ಅಥವಾ ಕಾಂಗ್ರೆಸ್ ಪಕ್ಷದ್ದಾಗಲಿ ಯಾವುದೇ ಪಾತ್ರ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮೋದಿ ಅವರಿಗೆ ವೀಸಾ ನೀಡಬೇಡಿ ಎಂದು ಒತ್ತಾಯಿಸಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಮಾ ಅವರಿಗೆ 65 ಸಂಸದರು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಪಾಲ್, ಈ ಎಲ್ಲ ಬೆಳವಣಿಗೆಗಳಿಗೆ ಅವರ ಕೋಮುವಾದವೇ ಕಾರಣ ಎಂದು ತಿಳಿಸಿದರು.
ಒಂದು ವೇಳೆ ಮೋದಿ ಕೋಮುವಾದಿ ಅಲ್ಲ ಎನ್ನುವುದಾದರೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ 17 ವರ್ಷದ ಮೈತ್ರಿಯನ್ನು ಕಡಿದುಕೊಂಡಿದ್ದು ಏಕೆ? ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ರಾಜಿನಾಮೆ ನೀಡಿದ್ದು ಏಕೆ? ಎಂದು ಪಾಲ್ ಪ್ರಶ್ನಿಸಿದರು.