ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಶಾಸಕರ ಅಮಾನತು ರದ್ದು
ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಮಹಾರಾಷ್ಟ್ರ ವಿಧಾನಸಭೆಯ...
ಮುಂಬೈ: ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಮಹಾರಾಷ್ಟ್ರ ವಿಧಾನಸಭೆಯ ಐವರು ಶಾಸಕರ ಅಮಾನತು ನಿರ್ಧಾರವನ್ನು ಬುಧವಾರ ರದ್ದುಗೊಳಿಸಲಾಗಿದೆ.
ವಾಸೈ ಶಾಸಕ ಕ್ಷಿತಿಜ್ ಠಾಕೂರ್, ಎಂಎನ್‌ಎಸ್ ಶಾಸಕ ರಾಮ್ ಕದಂ, ರಾಜನ್ ಸಾಲ್ವಿ (ಶಿವಸೇನೆ), ಪ್ರದೀಪ್ ಜೈಸ್ವಾಲ್ (ಸ್ವತಂತ್ರ) ಮೊದಲಾದ ಶಾಸಕರನ್ನು ಮಾರ್ಚ್ 20ಕ್ಕೆ ಅಮಾನತುಗೊಳಿಸಲಾಗಿತ್ತು. ಅಮಾನತು ಅವಧಿ ಈ ವರ್ಷದ ಕೊನೆಯ ವರೆಗೆ ಎಂದು ಈ ಮೊದಲು ನಿರ್ಧರಿಸಲಾಗಿದ್ದರೂ, ಇದೀಗ ಶಾಸಕರ ಅಮಾನತು ರದ್ದುಗೊಳಿಸವಾಗಿದೆ.
ವಿಧಾನಸಭೆಯ ಮೊದಲನೆ ಮಹಡಿಯಲ್ಲಿದ್ದ ಪೊಲೀಸ್ ಅಧಿಕಾರಿಯ ಮೇಲೆ ಈ ಶಾಸಕರು ಹಲ್ಲೆ ಮಾಡಿದ್ದರು. ಎಫ್‌ಐಆರ್ ಪ್ರಕಾರ ಹಲ್ಲೆಗೊಳಗಾದ ಪೊಲೀಸ್ ಅಧಿಕಾರಿ ಅಸಿಸ್ಟೆಂಟ್ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ಸೂರ್ಯವಂಶಿ ಎಂದು ಹೇಳಲಾಗುತ್ತಿದೆ.
ಹಲ್ಲೆಗೆ ಕಾರಣ?
ಕ್ಷಿತಿಜ್ ಠಾಕೂರ್ ವಿಧಾನಸಭಾ ಕಲಾಪಕ್ಕೆ ಆಗಮಿಸುತ್ತಿದ್ದ ವೇಳೆ ಸೂರ್ಯವಂಶಿ ಅವರು ಠಾಕೂರ್ ಅವರ ಕಾರನ್ನು ನಿಲ್ಲಿಸಿದ್ದರು. ಠಾಕೂರ್ ಹೈ ಸ್ಪೀಡ್‌ನಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಸೂರ್ಯವಂಶಿ ಕಾರು ನಿಲ್ಲಿಸಲು ಹೇಳಿದ್ದು ಆ ವೇಳೆ ಶಾಸಕ ಮತ್ತು ಪೊಲೀಸ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಇದಾದನಂತರ ಸೂರ್ಯವಂಶಿ ಅವರನ್ನು ಅಮಾನತುಗೊಳಿಸಬೇಕೆಂದು ಶಾಸಕರು ಒತ್ತಾಯಿಸಿದ್ದರು.
ಅದೊಂದು ದಿನ ಸೂರ್ಯವಂಶಿ ಅವರು ವಿಸಿಟರ್ಸ್ ಗ್ಯಾಲರಿಯಲ್ಲಿ ಕುಳಿತಿರುವಾಗ, ಸೂರ್ಯವಂಶಿ ತಮ್ಮನ್ನು ನೋಡಿ ಚೇಷ್ಟೆ ಮಾಡಿದರು ಎಂದು ಆರೋಪಿಸಿ ಶಾಸಕರು ಸೂರ್ಯವಂಶಿ ಮೇಲೆ ಹಲ್ಲೆಗೈದಿದ್ದರು.