ಬಿಸಿಯೂಟ ಯೋಜನೆ ಬಹಿಷ್ಕರಿಸಲು 3 ಲಕ್ಷ ಶಿಕ್ಷಕರು ನಿರ್ಧಾರ
ಜುಲೈ 25ರಿಂದ ಬಿಹಾರದಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಹಿಷ್ಕರಿಸಲು 3 ಲಕ್ಷ ಶಾಲಾ ಶಿಕ್ಷಕರು ನಿರ್ಧರಿಸಿದ್ದಾರೆ...
ಪಾಟ್ನಾ: ಜುಲೈ 25ರಿಂದ ಬಿಹಾರದಲ್ಲಿ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆ ಬಹಿಷ್ಕರಿಸಲು 3 ಲಕ್ಷ ಶಾಲಾ ಶಿಕ್ಷಕರು ನಿರ್ಧರಿಸಿದ್ದಾರೆ. ಪಠ್ಯೇತರ ಕೆಲಸಗಳಿಂದ ತಾವು ದೂರವಿರಲು ಬಯಸುವುದಾಗಿ ಈ ಶಿಕ್ಷಕರು ಹೇಳಿದ್ದಾರೆ.
ಬಿಸಿಯೂಟದಲ್ಲಿ ವಿಷಯುಕ್ತ ಪದಾರ್ಥಗಳ ಬೆರಕೆಯಿಂದಾಗಿ 23 ಮಕ್ಕಳು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಯೋಜನೆಗೆ ಕೈಜೋಡಿಸಲು ನಮಗೆ ಇಷ್ಟವಿಲ್ಲ ಎಂಬುದು ಶಿಕ್ಷಕರ ಅಭಿಪ್ರಾಯ.
ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಹಾರ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ ಸಭೆ ಕರೆದಿದ್ದು, ಪ್ರಸ್ತುತ ಸಭೆಯಲ್ಲಿ ಬಿಸಿಯೂಟ ಬಹಿಷ್ಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಬರಜ್‌ನಂದನ್ ಶರ್ಮಾ ಹೇಳಿದ್ದಾರೆ.
ಸರ್ಕಾರ ನಮ್ಮನ್ನು ಪಠ್ಯ ಕಾರ್ಯಗಳಲ್ಲಿ ಮಾತ್ರ ತೊಡಗಿಸಿ, ಪಠ್ಯೇತರ ಕಾರ್ಯಗಳಲ್ಲಿ ಬೇರೆ ಏಜೆನ್ಸಿಗಳ ಸಹಾಯ ಪಡೆದುಕೊಳ್ಳಲಿ ಎಂದು ನಾವು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ ನಮ್ಮ ಮನವಿಗೆ ಸರ್ಕಾರ ಕಿವಿಗೊಡಲಿಲ್ಲ. ಶಿಕ್ಷಕರಿಗೆ ಈ ರೀತಿ ಪಠ್ಯೇತರ ಕಾರ್ಯಗಳನ್ನು ನೀಡಿ ಅವರಿಗೆ ಹೊರೆಯಾಗುವಂತೆ ಮಾಡುವುದು ಸರಿಯಲ್ಲ ಎಂದು ಶರ್ಮಾ ಹೇಳಿದ್ದಾರೆ.
ಅದೇ ವೇಳೆ ಈ ಯೋಜನೆಯಲ್ಲಿ ಯಾವುದೇ ತಪ್ಪುಗಳಾದರೆ ಅದಕ್ಕೆ ಶಿಕ್ಷಕರು ಕೂಡಾ ಹೊಣೆಯಾಗಬೇಕಾಗುತ್ತದೆ. ಇದರಿಂದ ಶಿಕ್ಷಕರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.