ಬಿಹಾರ ಬಿಸಿಯೂಟ ದುರಂತ: ಮುಖ್ಯೋಪಾಧ್ಯಾಯಿನಿ ಪೊಲೀಸರಿಗೆ ಶರಣು
ಛಪ್ರಾ(ಬಿಹಾರ): 23 ವಿದ್ಯಾರ್ಥಿಗಳನ್ನು ಬಲಿ ಪಡೆದ ಛಪ್ರಾ ಶಾಲೆಯ ಮುಖ್ಯೋಪಾಧ್ಯಾಯಿನಿ ಮೀನಾ ದೇವಿ ಅವರು ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ.
ಜುಲೈ 16ರಿಂದ ತಲೆಮರೆಸಿಕೊಂಡಿದ್ದ ಮುಖ್ಯೋಪಾಧ್ಯಾಯಿನಿಯನ್ನು ಇಂದು ಬಿಹಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆಗಾಗಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಮೀನಾ ದೇವಿ ಅವರ ವಿರುದ್ಧ ಸ್ಥಳೀಯ ಕೋರ್ಟ್ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು.
ಈ ನಡುವೆ ಮೀನಾ ದೇವಿ ಅವರ ವಕೀಲರು ನಿರೀಕ್ಷಣಾ ಜಾಮೀನಿಗಾಗಿ ಛಪ್ರಾ ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ.
ಛಪ್ರಾ ಜಿಲ್ಲೆಯ ಧರ್ಮಸ್ತಿ ಗಂಡಮಾನ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ದುರಂತಕ್ಕೆ ಅಡುಗೆ ಎಣ್ಣೆಯಲ್ಲಿನ ಮೋನೋಕ್ರೊಟೋಫಾಸ್ ಎಂಬ ಕೀಟನಾಶಕವೇ ಕಾರಣ ಎಂದು ವಿಧಿವಿಜ್ಞಾನ ಪ್ರಯೋಗಾಲದ ವರದಿ ಹೇಳಿದೆ.