ರಾಜಿನಾಮೆ ಕೊಡಲ್ಲ: ಉಮ್ಮನ್ ಚಾಂಡಿ
ಸೌರ ವಿದ್ಯುತ್ ಫಲಕ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ರಾಜಿನಾಮೆ ಕೊಡಲ್ಲ ಎಂದು ಕೇರಳ ಮುಖ್ಯಮಂತ್ರಿ...
ತಿರುವನಂತಪುರಂ: ಸೌರ ವಿದ್ಯುತ್ ಫಲಕ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ರಾಜಿನಾಮೆ ಕೊಡಲ್ಲ ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ. ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಾಧ್ಯಮಗಳು ಹೇಳಿದಂತೆ ತನ್ನ ವಿರುದ್ಧ ಯಾವುದೇ ಗಂಭೀರವಾದ ಹೇಳಿಕೆ ನೀಡಿಲ್ಲ ಎಂದು ಚಾಂಡಿ ಸ್ಪಷ್ಟಪಡಿಸಿದ್ದಾರೆ.
ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ನಾನು ರಾಜಿನಾಮೆ ನೀಡಲ್ಲ. ಕೋರ್ಟ್ ನನ್ನ ವಿರುದ್ಧ ಯಾವುದೇ ರೀತಿಯ ಹೇಳಿಕೆ ನೀಡಿಲ್ಲ ಎಂದು ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಚಾಂಡಿ ಹೇಳಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ರಾಜಿನಾಮೆ ನೀಡಬೇಕು ಮತ್ತು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ವಿಪಕ್ಷಗಳು ಒತ್ತಾಯಿಸಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಚಾಂಡಿ, ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ, ಈ ಬಗ್ಗೆ ನಾನು ಮುಚ್ಚಿಡುವಂತದ್ದು ಏನೂ ಇಲ್ಲ ಎಂದು ಹೇಳಿದ್ದಾರೆ.
ಅದೇ ವೇಳೆ ಚಾಂಡಿಯವರ ಸಂಬಂಧಿ ಹಾಗು ಕಚೇರಿಯ ಉದ್ಯೋಗಿಯೊಬ್ಬರು ರು.1.03 ಕೋಟಿ ಹಣ ಮೋಸ ಮಾಡಿದ್ದಾರೆ ಎಂದು ಎಂ.ಕೆ ಕುರುವಿಲ್ಲ ಎಂಬ ಉದ್ಯಮಿಯೊಬ್ಬರು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಚಾಂಡಿ, ಕುರುವಿಲ್ಲ ಅವರು ಹೇಳಿದಂತೆ ಆಂಡ್ಯ್ರೂಎಂಬ ಸಂಬಂಧಿಯಾಗಲಿ ದಲ್‌ಜೀತ್ ಎಂಬ ಕಚೇರಿ ಉದ್ಯೋಗಿ ನನ್ನ ಕಚೇರಿಯಲ್ಲಿ ಇಲ್ಲ ಎಂದು ಉತ್ತರಿಸಿದ್ದಾರೆ.