ಮುಂಬೈಯಲ್ಲಿ ರು.12ಕ್ಕೆ, ದೆಹಲಿಯಲ್ಲಿ ರು.5ಕ್ಕೆ ಊಟ ಸಿಗುತ್ತೆ: ಕಾಂಗ್ರೆಸ್
ಭಾರತದ ಬಡತನ ರೇಖೆಯ ಬಗ್ಗೆ ಚರ್ಚೆಯಾಗುತ್ತಿರುವ ವೇಳೆ ಭಾರತದ ಎರಡು ಮಹಾನಗರಗಳಲ್ಲಿ ಕಡಿಮೆ ಬೆಲೆಗೆ ಊಟ ಸಿಗುತ್ತದೆ...
ನವದೆಹಲಿ: ಭಾರತದ ಬಡತನ ರೇಖೆಯ ಬಗ್ಗೆ ಚರ್ಚೆಯಾಗುತ್ತಿರುವ ವೇಳೆ ಭಾರತದ ಎರಡು ಮಹಾನಗರಗಳಲ್ಲಿ ಕಡಿಮೆ ಬೆಲೆಗೆ ಊಟ ಸಿಗುತ್ತದೆ ಎಂದು ಕಾಂಗ್ರೆಸ್‌ನ ಇಬ್ಬರು ನಾಯಕರು ಹೇಳಿದ್ದಾರೆ.
ಬುಧವಾರ ಕಾಂಗ್ರೆಸ್ ವಕ್ತಾರ ರಾಜ್ ಬಬ್ಬರ್, ಇವತ್ತಿಗೂ ಮುಂಬೈಯಲ್ಲಿ ರು.12ಗೆ ಊಟ ಸಿಗುತ್ತೆ ಎಂದು ಹೇಳಿದ್ದಾರೆ. ನಾನು ಹೇಳಿದ್ದು ವಡಾಪಾವ್ ಬಗ್ಗೆ ಅಲ್ಲ. ಒಂದಿಷ್ಟು ಅನ್ನ, ದಾಲ್ ಸಾಂಬಾಪ್ ಮತ್ತು ಕೆಲವು ತರಕಾರಿಗಳು ಸೇರಿಸಿದ ಊಟ ರು.12ಕ್ಕೆ ಸಿಗುತ್ತದೆ ಎಂಬುದು ರಾಜ್ ಬಬ್ಬರ್ ಅವರ ಹೇಳಿಕೆ.
ಕಾಂಗ್ರೆಸ್ ನಾಯಕನ ಈ ಹಾಸ್ಯಾಸ್ಪದ ಹೇಳಿಕೆಯನ್ನು ಬಿಜೆಪಿ ಖಂಡಿಸಿದ್ದು, ಇದರ ಬೆನ್ನಲ್ಲೇ ಇನ್ನೋರ್ವ ಕೈ ನಾಯಕ ರು.5ಕ್ಕೆ ದೆಹಲಿಯಲ್ಲಿ ಊಟ ಸಿಗುತ್ತದೆ ಎಂದು ಹೇಳಿದ್ದಾರೆ.
ನನಗೆ ಮುಂಬೈ ಬಗ್ಗೆ ಗೊತ್ತಿಲ್ಲ. ಆದರೆ ರು.5ಕ್ಕೆ ದೆಹಲಿಯಲ್ಲಿ ಊಟ ಸಿಗುತ್ತದೆ. ಜಮಾ ಮಸೀದಿ ಪಕ್ಕ ನಿಮಗೆ ರು.5ಕ್ಕೆ ಊಟ ಸಿಗುತ್ತದೆ ಎಂದು ರಶೀದ್ ಮಸೂದ್ ಹೇಳಿದ್ದಾರೆ.
ಯುಪಿಎ ಸರ್ಕಾರ ಅಧಿಕಾರಕ್ಕೇರಿದ ನಂತರ ಬಡತನ ಪ್ರಮಾಣ ಇಳಿಮುಖವಾಗಿದೆ ಎಂದು ಯೋಜನಾ ಆಯೋಗ ಮಂಗಳವಾರ ಹೇಳಿತ್ತು. 2011-12ರಲ್ಲಿ ದೇಶದಲ್ಲಿ ಬಡತನದ ಪ್ರಮಾಣ ಶೇ. 21.9ಕ್ಕಿಳಿದಿದೆ. ಅಂದರೆ ಕಳೆದ 7 ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ. 15.3ರಷ್ಟು ಕಡಿಮೆಯಾಗಿದೆ ಎಂದು ಯೋಜನಾ ಆಯೋಗ ವರದಿ ನೀಡಿತ್ತು.
ಈ ವರದಿ ಬಗ್ಗೆ ಬಿಜೆಪಿ ಮತ್ತುನ ಸಿಪಿಎಂ ಆಕ್ಷೇಪ ವ್ಯಕ್ತಪಡಿಸಿದ್ದು, ಯೋಜನಾ ಆಯೋಗದ ವರದಿ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಟೀಕಿಸಿದ್ದುವು.
ಇದೀಗ ಬಡತನ ರೇಖೆ ಇಳಿಕೆಯಾಗಿರುವ ಬಗ್ಗೆ ಸಮರ್ಥನೆ ನೀಡುವ ಸಲುವಾಗಿ ಕಾಂಗ್ರೆಸ್ ನಾಯಕರು ಮೆಟ್ರೋ ನಗರಗಳಲ್ಲಿ ಕಡಿಮೆ ಬೆಲೆಗೆ ಊಟ ಸಿಗುತ್ತದೆ ಎಂಬ ಹೇಳಿಕೆಯನ್ನು ನೀಡತೊಡಗಿದ್ದಾರೆ.