ವಾಜಪೇಯಿ ಕೇಳಿದರೆ ಮಾತ್ರ ಭಾರತರತ್ನ ವಾಪಸ್ ಮಾಡುತ್ತೇನೆ: ಸೇನ್
ನೊಬೇಲ್ ಪ್ರಶಸ್ತಿ ಪುರಸ್ಕೃತ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಅಮರ್ತ್ಯ ಸೇನ್ ಅವರಿಂದ ಭಾರತ ರತ್ನ ಪ್ರಶಸ್ತಿ ವಾಪಸ್ ಪಡೆದುಕೊಳ್ಳಬೇಕೆಂದು...
ನವದೆಹಲಿ: ನೊಬೇಲ್ ಪ್ರಶಸ್ತಿ ಪುರಸ್ಕೃತ ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಅಮರ್ತ್ಯ ಸೇನ್ ಅವರಿಂದ ಭಾರತ ರತ್ನ ಪ್ರಶಸ್ತಿ ವಾಪಸ್ ಪಡೆದುಕೊಳ್ಳಬೇಕೆಂದು ಬಿಜೆಪಿ ಸಂಸದ ಚಂದನ್ ಮಿತ್ರಾ ಹೇಳಿಕೆಗೆ ಸೇನ್ ಇದೀಗ ಪ್ರತಿಕ್ರಿಯಿಸಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದರೆ ಮಾತ್ರ ನಾನು ಭಾರತ ರತ್ನ ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ ಎಂದು ಅಮರ್ತ್ಯ ಸೇನ್ ಗುರುವಾರ ಹೇಳಿದ್ದಾರೆ.
ಒಬ್ಬ ಭಾರತೀಯನಾಗಿ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ನೋಡಲು ನಾನು ಇಷ್ಟಪಡುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಅಮರ್ತ್ಯ ಸೇನ್ ಹೇಳಿದ್ದು, ಇದು ವಿವಾದಕ್ಕೆಡೆ ಮಾಡಿತ್ತು.
ಬಿಜೆಪಿಯ ಚಂದನ್ ಮಿತ್ರಾ ಅವರ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್ ಇದು ಬಿಜೆಪಿಯ ನಿರಂಕುಶ ಪ್ರಭುತ್ವವನ್ನು ಬಿಂಬಿಸುತ್ತಿದೆ ಎಂದು ಹೇಳಿದೆ.
ಬಿಜೆಪಿ ನೇತೃತ್ವದ ಸರ್ಕಾರವಿರುವಾಗಲೇ ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದರು ಎಂಬ ಮಾಹಿತಿ ಚಂದನ್ ಮಿತ್ರಾ ಅವರಿಗೆ ಇದ್ದಂತಿಲ್ಲ.
ಪ್ರಸ್ತುತ ಪ್ರಶಸ್ತಿಯನ್ನು ವಾಪಸ್ ಕೊಡಿ ಎಂದು ವಾಜಪೇಯಿ ಹೇಳಿದರೆ ಮಾತ್ರ ನಾನು ಪ್ರಶಸ್ತಿಯನ್ನು ವಾಪಸ್ ಮಾಡುತ್ತೇನೆ.
ಏತನ್ಮಧ್ಯೆ, ಪ್ರಶಸ್ತಿ ವಾಪಸ್ ಮಾಡಿ ಎಂಬ ಬೇಡಿಕೆ ಮಿತ್ರಾ ಅವರಿಂದ ಬಂದಿರುವುದು ಹಾಗು ಅದನ್ನು ಮಿತ್ರಾ ಅವರ ವೈಯಕ್ತಿಕ ಬೇಡಿಕೆ ಎಂದು ಬಣ್ಣಿಸಿರುವುದು ದುರದೃಷ್ಟಕರ ಎಂದು ಸೇನ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿರುವಾಗ ತಾನು ಎಲ್. ಕೆ ಅಡ್ವಾಣಿ, ಯಶ್ವಂತ್ ಸಿನ್ಹಾ, ಜಸ್ವಂತ್ ಸಿಂಗ್ ಮತ್ತು ಅರುಣ್ ಜೇಟ್ಲಿ ಜತೆ ಹಲವಾರು ಬಾರಿ ರಾಜಕೀಯ ಚರ್ಚೆಗಳನ್ನು ಮಾಡಿದ್ದೇನೆ. ಆದರೆ ಪ್ರಶಸ್ತಿ ಹಿಂತಿರುಗಿಸಬೇಕೆಂಬ ಬೇಡಿಕೆ ದುರದೃಷ್ಟಕರ ಎಂದು ಸೇನ್ ಮಾರ್ಮಿಕವಾಗಿ ನುಡಿದಿದ್ದಾರೆ.