ಏಡ್ಸ್ ಪೀಡಿತ 5 ಮಕ್ಕಳು ಸ್ಮಶಾನದಲ್ಲಿ ವಾಸ
ಉತ್ತರ ಪ್ರದೇಶದಲ್ಲಿ ಏಡ್ಸ್ ಪೀಡಿತರಾದ 5 ಮಕ್ಕಳು ಸ್ಮಶಾನದಲ್ಲಿ ವಾಸ ಮಾಡುತ್ತಿರುವುದು ಇದೀಗ ಸುದ್ದಿಯಾಗಿದೆ. ಇಲ್ಲಿನ...
ಪ್ರತಾಪ್ಗಢ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಏಡ್ಸ್ ಪೀಡಿತರಾದ 5 ಮಕ್ಕಳು ಸ್ಮಶಾನದಲ್ಲಿ ವಾಸ ಮಾಡುತ್ತಿರುವುದು ಇದೀಗ ಸುದ್ದಿಯಾಗಿದೆ. ಇಲ್ಲಿನ ಜನರಲ್ಲಿ ಏಡ್ಸ್ ಬಗ್ಗೆಯಿರುವ ಮೂಢನಂಬಿಕೆ ಎಷ್ಟು ಗಾಢವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಏಡ್ಸ್ನಿಂದಾಗಿ ತಮ್ಮ ಹೆತ್ತವರು ಸಾವನ್ನಪ್ಪಿದ ನಂತರ ಈ ಐವರು ಮಕ್ಕಳು ಸ್ಮಶಾನದಲ್ಲಿ ವಾಸ ಮಾಡುತ್ತಿದ್ದಾರೆ. ಈ ಮಕ್ಕಳಿಂದ ತಮಗೂ ಏಡ್ಸ್ ಬರಬಹುದು ಎಂಬ ಭೀತಿಯಿಂದ ಸಂಬಂಧಿಕರು ಮತ್ತು ಊರವರು ಜಮುವಾ ಗ್ರಾಮದಿಂದ 3 ತಿಂಗಳ ಹಿಂದೆ ಈ ಮಕ್ಕಳನ್ನು ಹೊರಗೆ ಅಟ್ಟಿದ್ದಾರೆ. ಐವರು ಮಕ್ಕಳಲ್ಲಿ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಇದ್ದಾಳೆ.
ಊರಿನಿಂದ ಹೊರಗೆ ಹಾಕಿರುವ ಕಾರಣ ಈ ಮಕ್ಕಳು ತಮ್ಮ ಹೆತ್ತವರನ್ನು ದಫನ ಮಾಡಿದ ಸ್ಮಶಾನದಲ್ಲೇ ವಾಸ್ತವ್ಯ ಕಂಡುಕೊಂಡಿದ್ದಾರೆ. ಈ ಮಕ್ಕಳಲ್ಲಿ ದೊಡ್ಡವನಿಗೆ 17 ವರ್ಷವಿದ್ದು, ಚಿಕ್ಕವನಿಗೆ 7 ವರ್ಷ ವಯಸ್ಸಿದೆ.
ಹರಿದ ಟಾರ್ಪೋಲಿನ್ ಟೆಂಟ್ ಮತ್ತು ಮುರಿದ ಮೂರು ಮಂಚಗಳೇ ಇವರ ಮನೆಯಾಗಿದೆ. ಹೊಟ್ಟೆಗೆ ಹಸಿವಾದಾಗ ಗ್ರಾಮದವರು ಕೊಟ್ಟ ಆಹಾರವೇ ಇವರಿಗೆ ಗತಿ.
ಇಷ್ಟು ಮಾತ್ರವಲ್ಲದೆ ಆ ಮಕ್ಕಳು ಈಗ ಸ್ಮಶಾನದಲ್ಲಿ ತಮ್ಮ ಪೂರ್ವಜರಿಗೆ ಕೂಡಾ ಮೈಲಿಗೆ ಮಾಡುತ್ತಿದ್ದಾರೆ ಎಂದು ಕೆಲವು ಗ್ರಾಮಸ್ಥರು ಮಕ್ಕಳನ್ನು ಅಲ್ಲಿಂದಲೂ ಓಡಿಸುವ ಹುನ್ನಾರ ಮಾಡಿದ್ದರು.
ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಸರ್ಕಾರ ಈ ನಿರ್ಗತಿಕ ಮಕ್ಕಳಿಗೆ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಟ್ಟು, ಮಕ್ಕಳನ್ನು ಮುಖ್ಯಧಾರೆಗೆ ತರುವುದಾಗಿ ಭರವಸೆ ನೀಡಿದೆ.