ಕಾಂಗ್ರೆಸ್ ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ: ರಾಜ್ನಾಥ್
ಕಾಂಗ್ರೆಸ್ ಪಕ್ಷ ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ಎಂದು ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಸವಾಲೆಸೆದಿದ್ದಾರೆ...
ನ್ಯೂಯಾರ್ಕ್: ಕಾಂಗ್ರೆಸ್ ಪಕ್ಷ ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ಎಂದು ಬಿಜೆಪಿ ಅಧ್ಯಕ್ಷ ರಾಜ್ನಾಥ್ ಸಿಂಗ್ ಸವಾಲೆಸೆದಿದ್ದಾರೆ.
ಸಾರ್ವತ್ರಿಕ ಚುನಾನಣೆಗೆ ಮುನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸುವುದಕ್ಕೆ ಕಾಂಗ್ರೆಸ್ ಧೈರ್ಯ ತೋರಲಿ ಎಂದು ಇಂಡಿಯಾ- ಅಮೆರಿಕ ಚೇಂಬರ್ ಆಫ್ ಕಾಮರ್ಸ್ನಲ್ಲಿ ಮಾತನಾಡಿದ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಪಿ. ಚಿದಂಬರಂ ಮತ್ತು ಇನ್ನು ಹಲವಾರು ಸ್ಪರ್ಧಿಗಳು ಇದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಯಾರನ್ನು ಪ್ರಧಾನಿಯನ್ನಾಗಿಸಬೇಕು ಎಂಬುದರ ಬಗ್ಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಪ್ರಚಾರ ಸಮಿತಿಯ ಆಯ್ಕೆಯಲ್ಲಿ ತಮ್ಮ ಪಕ್ಷ ಪ್ರಜಾಪ್ರಭುತ್ವ ನೀತಿಯನ್ನು ಅನುಸರಿಸಿತ್ತು. ಆದರೆ ಕಾಂಗ್ರೆಸ್ನಲ್ಲಿ ಇನ್ನೂ ವೈರುಧ್ಯಗಳಿವೆ.
2009ರಲ್ಲಿ ನಾವು ಹಿರಿಯ ನಾಯಕರಾದ ಎಲ್.ಕೆ ಆಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದಾಗ ಮತ್ತು 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದಾಗ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿರಲಿಲ್ಲ. ಕಾಂಗ್ರೆಸ್ ಇದೀಗ ಹಗರಣ ಮತ್ತು ವೈಫಲ್ಯಗಳ ಮೂಲಕ ಜನರ ಗಮನವನ್ನು ಸೆಳೆಯಲು ಬಯಸುತ್ತಿದೆ ಎಂದು ರಾಜ್ನಾಥ್ಹೇಳಿದ್ದಾರೆ.