ತೆಲಂಗಾಣ ವಿವಾದ: ಮತ್ತಿಬ್ಬರು ಶಾಸಕರಿಂದ ರಾಜಿನಾಮೆ
ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಆಂಧ್ರಪ್ರದೇಶದ ಮತ್ತೆ ಇಬ್ಬರು ಶಾಸಕರು ರಾಜಿನಾಮೆ ನೀಡಿರುವುದಾಗಿ..
ಹೈದರಾಬಾದ್: ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಆಂಧ್ರಪ್ರದೇಶದ ಮತ್ತೆ ಇಬ್ಬರು ಶಾಸಕರು ರಾಜಿನಾಮೆ ನೀಡಿರುವುದಾಗಿ ಶುಕ್ರವಾರ ಹೇಳಿದ್ದಾರೆ. ಈ ಮೂಲಕ ಈಗ ಪ್ರತ್ಯೇಕ ರಾಜ್ಯಕ್ಕಾಗಿ ರಾಜಿನಾಮೆ ನೀಡಿದ ಶಾಸಕರ ಸಂಖ್ಯೆ 19ಕ್ಕೆ ಏರಿದೆ.
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಕುರಿತು ಕೇಂದ್ರ ಸರ್ಕಾರ ಶೀಘ್ರವೇ ತನ್ನ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿ, ಆಂಧ್ರದ ರಾಯಲಸೀಮೆಯ ಸೀಮಂಧ್ರ ಶಾಸಕರು, ತಮ್ಮ ರಾಜಿನಾಮೆ ಪತ್ರವನ್ನು ಸ್ಪೀಕರ್ ಅವರಿಗೆ ರವಾನಿಸಿದ್ದಾರೆ.
ನಿನ್ನೆಯಷ್ಟೇ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯಿಸಿ, ವೈಎಸ್ಆರ್ ಕಾಂಗ್ರೆಸ್ನ 16 ಶಾಸಕರು ಹಾಗೂ ಆಡಳಿತರೂಢ ಕಾಂಗ್ರೆಸ್ನ ಓರ್ವ ಶಾಸಕರು ತಮ್ಮ ರಾಜಿನಾಮೆಯನ್ನು ಸ್ಪೀಕರ್ ಅವರಿಗೆ ಸಲ್ಲಿಸಿದ್ದರು. ಇಂದು ಕಾಂಗ್ರೆಸ್ನ ಮತ್ತಿಬ್ಬರು ಶಾಸಕರು ಸ್ಪೀಕರ್ ಎನ್. ಮನೋಹರ್ ಅವರಿಗೆ ರಾಜಿನಾಮೆ ಪತ್ರ ಕಳುಹಿಸಿರುವುದಾಗಿ ಹೇಳಿಕೊಂಡಿದ್ದಾರೆ.
ನೆಲ್ಲೋರ್ ಜಿಲ್ಲೆಯ ಶಾಸಕರಾದ ಶ್ರೀಧರ್ ಕೃಷ್ಣ ರೆಡ್ಡಿ ಹಾಗೂ ಎ.ಪ್ರಭಾಕರ್ ರೆಡ್ಡಿ ಅವರು, ಫ್ಯಾಕ್ಸ್ ಮೂಲಕ ಸ್ಪೀಕರ್ ಅವರಿಗೆ ತಮ್ಮ ರಾಜಿನಾಮೆ ಪತ್ರ ಕಳುಹಿಸಿರುವುದಾಗಿ ವರದಿಗಾರರಿಗೆ ತಿಳಿಸಿದ್ದಾರೆ.