ನನ್ನ ಹೇಳಿಕೆಯನ್ನು ತಿರುಚಲಾಗಿದೆ: ದಿಗ್ವಿಜಯ್ ಸಿಂಗ್
ಕಾಂಗ್ರೆಸ್ನ ಸಂಸದೆ ಬಗ್ಗೆ ಕಾಮೆಂಟ್ ಮಾಡಿ ಮತ್ತೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿರುವ ಕಾಂಗ್ರೆಸ್ ಪ್ರಧಾನ...
ನವದೆಹಲಿ: ಕಾಂಗ್ರೆಸ್ನ ಸಂಸದೆ ಬಗ್ಗೆ ಕಾಮೆಂಟ್ ಮಾಡಿ ಮತ್ತೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಇದೀಗ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ.
ನಾನು ಆ ರೀತಿಯಲ್ಲಿ ಕಾಮೆಂಟ್ ಮಾಡಿಲ್ಲ. ನನ್ನ ಮಾತಿಗೆ ಬೇರೆಯೇ ಅರ್ಥ ಕಲ್ಪಿಸಲಾಗಿದೆ ಎಂದು ದಿಗ್ವಿಜಯ್ ಮಾಧ್ಯಮದವರಲ್ಲಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಆಪ್ತ ಸಹಾಯಕಿಯಾಗಿರುವ ಮಧ್ಯಪ್ರದೇಶದ ಸಂಸದೆ ಮೀನಾಕ್ಷಿ ನಟರಾಜನ್ ಅವರನ್ನು ದಿಗ್ವಿಜಯ್ ಸಿಂಗ್ 100% ಸೆಕ್ಸಿ ಮಹಿಳೆ ಎಂದು ಹೇಳಿರುವುದು ಹೊಸ ವಿವಾದ ಸೃಷ್ಟಿಸಿತ್ತು
ಮಧ್ಯಪ್ರದೇಶದ ಮಂದ್ಸೌರ್ನಲ್ಲಿ ಸಾರ್ವಜನಿಕರನ್ನುದ್ದೇಶಿಸಿದ ಮಾತನಾಡಿದ ದಿಗ್ವಿಜಯ್, ಅವರೊಬ್ಬ ಸಂಸತ್ ಸದಸ್ಯೆ, ಆಕೆ ಗಾಂಧಿವಾದಿ. ಆಕೆ ತುಂಬಾ ಸರಳ ಹಾಗು ವಿಶ್ವಾಸರ್ಹಳು. ಆಕೆ ಗ್ರಾಮದಿಂದ ಗ್ರಾಮಗಳಿಗೆ ಹೋಗಿ ಎಲ್ಲವನ್ನು ಆಲಿಸುತ್ತಾಳೆ. ನನಗೆ ರಾಜಕೀಯದಲ್ಲಿ 40-42 ವರ್ಷದ ಅನುಭವವಿದ್ದು, ನಾನು ಹಳೇ ರಸಿಕ. ಯಾರು ಒಳ್ಳೆಯವರು ಯಾರು ಕೆಟ್ಟವರು ಎಂಬುದರ ಬಗ್ಗೆ ರಾಜಕಾರಣಿಗಳು ಬೇಗನೆ ಪತ್ತೆ ಹಚ್ಚಿ ಬಿಡುತ್ತಾರೆ. ಆಕೆ 100% ಸೆಕ್ಸೀ ಮಹಿಳೆ ಹಾಗು ಆಕೆ ಬಡವರಿಗಾಗಿ ಹೋರಾಡುತ್ತಿದ್ದಾಳೆ.
ಆಕೆ ಗುಂಪಿನಲ್ಲಿ ಸೇರುವುದಿಲ್ಲ, ಬದಲಾಗಿ ಗುಂಪನ್ನು ತನ್ನೊಂದಿಗೆ ಒಯ್ಯುತ್ತಾಳೆ. ಆಕೆ ದೆಹಲಿಯಲ್ಲಿ, ಲೋಕಸಭೆಯಲ್ಲಿ ಹಾಗು ಪಕ್ಷದ ಒಳಗೂ ತನ್ನ ಛಾಪು ಮೂಡಿಸಿದ್ದಾಳೆ. ಸೋನಿಯಾಜಿ ಮತ್ತು ರಾಹುಲ್ಜಿ ಆಕೆಗೆ ಗೌರವ ನೀಡುತ್ತಾರೆ. ನನ್ನಂತಹ ನಾಯಕರು ಆಕೆಗೆ ಹೆದರುತ್ತಾರೆ. ಆಕೆ ನಿಮ್ಮ ಸಂಸದೆ, ಆದ್ದರಿಂದ ಆಕೆಗೆ ಬೆಂಬಲ ನೀಡಿ.
ದಿಗ್ವಿಜಯ್ ಸಿಂಗ್ ಈ ರೀತಿ ಹೇಳುತ್ತಿದ್ದರೆ, ಮೀನಾಕ್ಷಿ ನಟರಾಜನ್ ಅಲ್ಲೇ ಉಪಸ್ಥಿತರಿದ್ದರು.
ಆದಾಗ್ಯೂ, ಸಿಂಗ್ ಅವರ ಹೇಳಿಕೆ ಬಗ್ಗೆ ಮೀನಾಕ್ಷಿ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.