ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಮಗೂ '108' ಪ್ರತಿಭಟನೆಗೂ ಸಂಬಂಧವಿಲ್ಲ: ಸಚಿವ ಖಾದರ್

ನಮಗೂ '108' ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಖಡಕ್ ಆಗಿ ಹೇಳಿರುವ ..

Lingaraj Badiger
Updated On : 26 Jul 2013, 12:51 pm

ಬೆಂಗಳೂರು: ನಮಗೂ '108' ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಖಡಕ್ ಆಗಿ ಹೇಳಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು, ರೋಗಿಗಳಿಗೆ ತೊಂದರೆಯಾದರೆ 108 ಆಂಬುಲೆನ್ಸ್ ನಿರ್ವಹಣೆ ಮಾಡುತ್ತಿರುವ ಜಿವಿಕೆ ಕಂಪನಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.

108 ಆಂಬುಲೆನ್ಸ್ ನೌಕರರ ಪ್ರತಿಭಟನೆ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿರುವ ಖಾದರ್, ಪ್ರತಿಭಟನೆಗೂ ನಮಗೂ ಯಾವುದೇ ಸಂಬಂಧ ಇಲ್ಲ. ಆಂಬುಲೆನ್ಸ್ ನಿರ್ವಹಣೆ ಸಂಬಂಧ ಜಿವಿಕೆ ಹಾಗೂ ಸರ್ಕಾರದ ನಡುವೆ ಒಪ್ಪಂದವಾಗಿದೆ. ಒಪ್ಪಂದದ ಪ್ರಕಾರ ನೌಕರರ ವೇತನ ಹಾಗೂ ನಿರ್ವಹಣೆಯನ್ನು ಕಂಪನಿಯೇ ಮಾಡುತ್ತಿದೆ. ಒಂದು ವೇಳೆ ವೇತನ ನೀಡುತ್ತಿಲ್ಲ ಎಂದು ಯಾರಾದರೂ ದೂರು ನೀಡಿದರೆ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಆದರೆ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ನಿರ್ವಹಣೆಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಮತ್ತು ಸಿಬ್ಬಂದಿಗೆ ಉದ್ಯೋಗ ಭದ್ರತೆ ನೀಡಬೇಕು ಹಾಗೂ ಕನಿಷ್ಠ ವೇತನ ನೀಡುವ ಬಗ್ಗೆ ಇಂದು ಸಂಜೆಯೊಳಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ರಾತ್ರಿಯಿಂದಲೇ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಕವಚ(108) ನೌಕರರ ಸಂಘದ ಅಧ್ಯಕ್ಷ ಆರ್.ಶ್ರೀಧರ್ ಅವರು ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಕವಚ ಯೋಜನೆ ನಿರ್ವಹಣೆಗೆ ತಗಲುವ ಎಲ್ಲ ಖರ್ಚುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಭರಿಸುತ್ತಿದ್ದರೂ, ಯೋಜನೆ ನಿರ್ವಹಣೆ ಜವಾಬ್ದಾರಿಯನ್ನು ಆಂಧ್ರಪ್ರದೇಶ ಮೂಲದ ಜಿ.ವಿ.ಕೆ. ಇ.ಎಂ.ಆರ್.ಐ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು ಯೋಜನೆ ಸಂಪೂರ್ಣ ನಿರ್ವಹಣೆ ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಶ್ರೀಧರ್ ಆಗ್ರಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement