ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿಗೆ ಒಮ್ಮತವಿದೆ: ರಾಜನಾಥ್ ಸಿಂಗ್
ನ್ಯೂಯಾರ್ಕ್: 2014ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ಗೆ ಒಮ್ಮತವಿದೆ ಎಂದು ಅಧ್ಯಕ್ಷ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಅಮೆರಿಕದಲ್ಲಿ ಖಾಸಗಿ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ ಅವರು, ಈಗಾಗಲೇ ಪ್ರಧಾನಿ ಅಭ್ಯರ್ಥಿ ಆಯ್ಕೆ ಸಂಬಂಧ ಭಾರತೀಯ ಜನತಾ ಪಕ್ಷದಲ್ಲಿ ಒಮ್ಮತ ಮೂಡಿದೆ ಎಂದು ಹೇಳಿದ್ದಾರೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ಆಯ್ಕೆ ಬಗ್ಗೆ ಚಿಂತಿಸುವ ಅಗತ್ಯ ಬಂದಿಲ್ಲ. ಪಕ್ಷ ಪ್ರಧಾನಿ ಅಭ್ಯರ್ಥಿಯನ್ನಾ ಹೆಸರಿಸುವುದನ್ನು ನಿಲ್ಲಿಸಿದೆ ಹೊರತು, ಇನ್ನಾವುದೇ ರೀತಿಯ ಭಿನ್ನಭಿಪ್ರಾಯಗಳು ಪಕ್ಷದಲಿಲ್ಲ. ಸರಿಯಾದ ಸಮಯದಲ್ಲಿ ಪ್ರಧಾನಿ ಅಭ್ಯರ್ಥಿ ಹೆಸರು ಬಹಿರಂಗ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿಯಲ್ಲಿ ಸಾಮರಸ್ಯ ಮೂಡದೇ, ಗೊಂದಲಕ್ಕೀಡಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡುತ್ತಿದ್ದರೆ, ಇತ್ತ ಪಕ್ಷದ ಹಿರಿಯ ನಾಯಕ ಎಲ್.ಕೆ ಅಡ್ವಾಣಿಯವರು ಸೇರಿದಂತೆ ಇತರೆ ಕೆಲ ಮುಖಂಡರು ಪರೋಕ್ಷವಾಗಿ ಮೋದಿ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು.
ಇದರ ನಡುವೆ ವಿದೇಶದಲ್ಲಿ ರಾಜನಾಥ್ ಸಿಂಗ್ ಅವರು ಪ್ರಧಾನಿ ಅಭ್ಯರ್ಥಿ ಆಯ್ಕೆಯಲ್ಲಿ ಒಮ್ಮತವಿದೆ ಎಂದು ಹೇಳಿ ಪಕ್ಷದ ಒಗ್ಗಟ್ಟನ್ನು ಸಾರುತ್ತಿದ್ದಾರೆ.