ಪ್ರಧಾನಿ ಸ್ಥಾನಕ್ಕೆ ರಾಹುಲ್, ಮೋದಿ ಸೂಕ್ತರಲ್ಲ: ಅಣ್ಣಾ ಹಜಾರೆ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ..
ಫರುಖಾಬಾದ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಪ್ರಧಾನಿ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಳಲ್ಲಿ ಎಂದು ಸಾಮಾಜಿಕ ಹೋರಾಟಗಾರ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರು ಶುಕ್ರವಾರ ಹೇಳಿದ್ದಾರೆ.
ಪ್ರಧಾನಿ ಅಭ್ಯರ್ಥಿ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾ ಹಜಾರೆ, ಮೋದಿ ಹಾಗೂ ರಾಹುಲ್ ಇಬ್ಬರಿಗೂ ಪ್ರಧಾನಿಯಂತಹ ಉನ್ನತ ಹುದ್ದೆ ನೀಡುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಮತ್ತು ಇಬ್ಬರಿಗೂ ಆ ಹುದ್ದೆಯನ್ನು ಅಲಂಕರಿಸುವ ಯೋಗ್ಯತೆ ಇಲ್ಲ ಎಂದಿದ್ದಾರೆ.
ಜನತಂತ್ರ ಯಾತ್ರೆಯಲ್ಲಿ ಭಾಗವಹಿಸಿಲು ಇಲ್ಲಿಗೆ ಆಗಮಿಸಿರುವ ಹಜಾರೆ, ಗುಜರಾತ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಮೋದಿ, ಯಾವುದೇ ಅಧಿಕಾರವಿಲ್ಲದ ಲೋಕಾಯುಕ್ತವನ್ನು ಸ್ಥಾಪಿಸಿದ್ದಾರೆ. ಅಂತಹ ಲೋಕಾಯುಕ್ತರ ನೇಮಕದಿಂದ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ ಎಂದಿದ್ದಾರೆ.
ಇನ್ನು ರಾಹುಲ್ ಗಾಂಧಿ ಸಹ ಪ್ರಧಾನಿ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಲ್ಲ ಎಂದು ಹಜಾರೆ ಹೇಳಿದ್ದಾರೆ.
ಇದೇ ವೇಳೆ ಬಡತನದ ಬಗ್ಗೆ ಪ್ರತಿಕ್ರಿಯಿಸಿದ ಹಜಾರೆ, ಹವಾನಿಯಂತ್ರಿತ(ಎಸಿ) ಕಚೇರಿಗಳಲ್ಲಿ ಕುಳಿತಿರುವವರಿಗೆ ಬಡತನದ ಬೆಲೆ ಗೊತ್ತಾಗುವುದಿಲ್ಲ. 33 ರುಪಾಯಿಗೆ ಒಬ್ಬರ ಹೊಟ್ಟೆಗೆ ಊಟ ಹಾಕಲು ಸಾಧ್ಯವಿಲ್ಲ ಎಂದರು.