ಕೇಂದ್ರದ 'ಆಹಾರ ಭದ್ರತೆ'ಗೆ ಮಾಯಾ ಬೆಂಬಲ
ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಕೇಂದ್ರ ಸರ್ಕಾರದ ಆಹಾರ ಭದ್ರತಾ ಯೋಜನೆಗೆ..
ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಕೇಂದ್ರ ಸರ್ಕಾರದ ಆಹಾರ ಭದ್ರತಾ ಯೋಜನೆಗೆ ಶನಿವಾರ ಬೆಂಬಲ ಸೂಚಿಸಿದ್ದಾರೆ. ಆದರೆ ಸುಗ್ರೀವಾಜ್ಞೆ ಮೂಲಕ ಯೋಜನೆಯನ್ನು ಜಾರಿಗೆಗೊಳಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾ, ನಮ್ಮ ಪಕ್ಷ ಆಹಾರ ಭದ್ರತೆ ಯೋಜನೆಯನ್ನು ಬೆಂಬಲಿಸುತ್ತದೆ. ಆದರೆ ಈ ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಿ ನಂತರ ಒಮ್ಮತದಿಂದ ಅಂಗೀಕರಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ವೇಳೆ, 5 ಹಾಗೂ 12 ರುಪಾಯಿಗೆ ಮುಂಬೈ, ದೆಹಲಿಯಲ್ಲಿ ಊಟ ಸಿಗುತ್ತದೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸಿದ ಮಾಯಾವತಿ, ಇದೊಂದು ಬಡವರ ಮೇಲಿನ ಕೆಟ್ಟ ಜೋಕ್ ಎಂದಿದ್ದಾರೆ. ಅಲ್ಲದೆ ತಮ್ಮ ಜೀವನದಲ್ಲಿ ಯಾವತ್ತು ಬಡತನವನ್ನು ಕಾಣದ ನಾಯಕರು ಮಾತ್ರ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಕ್ತಾರ ರಾಜ್ ಬಬ್ಬರ್ ಹಾಗೂ ಮತ್ತೊಬ್ಬ ಪಕ್ಷದ ಮುಖಂಡ ರಶೀದ್ ಮಸೂದ್ ಅವರು, 12 ಹಾಗೂ 5 ರುಪಾಯಿಗೆ ಊಟ ಸಿಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಅಲ್ಲದೆ ಈ ಸಂಬಂಧ ಕಡೆಗೂ ವಿಷಾದ ವ್ಯಕ್ತಪಡಿಸಿರುವ ಬಬ್ಬರ್, ಈ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ನನ್ನ ಹೇಳಿಕೆಯು ಪಕ್ಷಕ್ಕೆ ಯಾವುದೇ ರೀತಿಯಿಂದ ಹಾನಿ ಮಾಡುವುದು ನನಗೆ ಇಷ್ಟ ಇಲ್ಲ ಎಂದಿದ್ದಾರೆ.