ಜೀನ್ಸ್, ಹೊರತಿಂಡಿ ನಿಷೇಧ ಹಿಂಪಡೆದ ಎಎಂಯು
ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಬಾರದು, ಸಿನಿಮಾ ನೋಡಬಾರದು ಎಂದು ವಸತಿ...
ಲಖನೌ: ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಬಾರದು, ಸಿನಿಮಾ ನೋಡಬಾರದು ಎಂದು ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರಿಗೆ ಹೇರಲಾಗಿದ್ದ ನಿಷೇಧವನ್ನು ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯ(ಎಎಂಯೂ) ಶನಿವಾರ ಹಿಂಪಡೆದಿದೆ.
ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರು ಸಿನೆಮಾ ವಿಕ್ಷಣೆಗೆ, ರೆಸ್ಟೋರೆಂಟ್, ಹೋಟೆಲ್ ಮತ್ತು ಸೈಬರ್‌ಗೆ ತೆರಳಬಾರದು ಎಂದು ನಿರ್ಬಂಧ ಹಾಕಲಾಗಿತ್ತು. ಎಲ್ಲಾ ವಿದ್ಯಾರ್ಥಿನಿಯರು ತಮ್ಮ ಪೋಷಕರ ಬಳಿ ಮಾತನಾಡಲು ಕೇವಲ ಒಂದು ಮೊಬೈಲ್ ಫೋನ್ ಬಳಕೆ ಮಾಡಬೇಕು ಎಂದು ವಸತಿ ನಿಲಯಗಳ ಮುಖ್ಯಾಧಿಕಾರಿ ಡಾ. ಗಜಲ್ ಪರ್ವೀನ್ ಸೂಚಿಸಿದ್ದರು.
ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ಆದೇಶವನ್ನು ಮುರಿದರೆ ಅವರಿಗೆ 500ರೂ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಸಿದ್ದರು.
ಈ ಆದೇಶಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಎಎಂಯು, ಗಜಲಾ ಪರ್ವೀನ್ ಅವರಿಂದ ವಿದ್ಯಾರ್ಥಿನಿಯರಿಗೆ ಕೇವಲ ಸಲಹೆ ನೀಡಲಾಗಿದೆ ಹೊರತು ಯಾವುದೇ ಆದೇಶ ಹೊರಡಿಸಿಲ್ಲ. ವಿದ್ಯಾರ್ಥಿನಿಯರು ಈ ಆದೇಶವನ್ನು ಪಾಲಿಸಬೇಕೆಂದು ಅಧಿಕೃತವಾಗಿ ಹೇಳಿಲ್ಲ. ವಸತಿ ನಿಲಯಗಳ ಮುಖ್ಯಾಧಿಕಾರಿಯಾಗಿರುವ ಪರ್ವೀನ್ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಸೂಚಿಸಲಾಗುವುದು ಎಂದು ಹೇಳಿದೆ.