ಪಾಕ್ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ, ಗಡಿಯಲ್ಲಿ ಗುಂಡಿನ ಕಾಳಗ
ಪಾಕಿಸ್ತಾನದ ಸೇನಾ ಪಡೆಗಳು ಶನಿವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಗಡಿ ನಿಯಂತ್ರಣ ರೇಖೆ(ಎಲ್ಒಸಿ)..
ಜಮ್ಮು: ಪಾಕಿಸ್ತಾನದ ಸೇನಾ ಪಡೆಗಳು ಶನಿವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯ ಬಳಿ ಭಾರತೀಯ ಸೇನಾ ಚೌಕಿ ಮೇಲೆ ಗುಂಡಿನ ದಾಳಿ ನಡೆಸಿದೆ.
ಭಾರತೀಯ ಸೈನಿಕರು ಸಹ ಪ್ರತಿ ದಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದೆ. ಜಮ್ಮು-ಕಾಶ್ಮೀರದ ಪೂಂಛ್ ಪ್ರಾಂತ್ಯದ ಕರ್ನಿಯಲ್ಲಿ ಉಭಯ ದೇಶಗಳ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು, ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ಇನ್ನು ವರದಿಯಾಗಿಲ್ಲ.
ಈ ತಿಂಗಳಲ್ಲೇ ಇದು ನಾಲ್ಕನೆ ಬಾರಿಗೆ ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಕಳೆದ ಜುಲೈ 22ರಂದು ಕದನ ವಿರಾಮ ಉಲ್ಲಂಘಿಸಿದ್ದ ಪಾಕ್, ಪೂಂಛ್ನಲ್ಲಿ ಭಾರತೀಯ ಸೇನೆಯ ಮೇಲೆ ಸಣ್ಣ ಪ್ರಮಾಣದ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತ ತಕ್ಕ ಉತ್ತರ ನೀಡಿತ್ತು. ಅಲ್ಲದೆ ಜುಲೈ 3ರಂದು ಪೊಲೀಸ್ ಪೇದೆಯ ಮೇಲೆ ಹಾಗೂ ಜುಲೈ 8ರಂದು ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ಮಾಡಿತ್ತು.