ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿ ಸೂಕ್ತ: ಶತ್ರುಘ್ನ ಸಿನ್ಹಾ
ಪಾಟ್ನಾ: ಜೆಡಿಯು ಮುಖಂಡ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ಅಭ್ಯರ್ಥಿಗೆ ಸೂಕ್ತ ವ್ಯಕ್ತಿ ಎಂದು ಬಿಜೆಪಿ ನಾಯಕ ಹಾಗೂ ಬಾಲಿವುಡ್ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ಮಂಗಳವಾರ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು ಪ್ರಧಾನಿ ಅಭ್ಯರ್ಥಿಗೆ ಸೂಕ್ತ ವ್ಯಕ್ತಿ. ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಜೆಡಿಯು ನಡುವಿನ ಭಿನ್ನಭಿಪ್ರಾಯಗಳನ್ನು ದೂರ ಮಾಡಿ ಮತ್ತೆ ಮೈತ್ರಿಯಾಗಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಶತ್ರುಘ್ನ ಸಿನ್ಹಾ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಬಾವುಟ ಹಾರಿಸಿರುವ ಶತ್ರುಘ್ನ ಸಿನ್ಹಾ ಅವರು ಇತ್ತೀಚೆಗಷ್ಟೇ ಪಕ್ಷ ಅಧಿಕಾರಕ್ಕೆ ಬಂದರೆ ಎಲ್.ಕೆ. ಆಡ್ವಾಣಿ ಅವರೇ ಪ್ರಧಾನಿಯಾಗಲಿ ಎಂದು ಒತ್ತಾಯಿಸಿದ್ದರು.
ಇದರ ಬೆನ್ನಲ್ಲೇ ಇಂದು ಬಿಜೆಪಿಯಿಂದ ಮೈತ್ರಿ ಮುರಿದು ಹೊರ ನಡೆದ ಜೆಡಿಯು ನಾಯಕ ನಿತೀಶ್ ಕುಮಾರ್ ಪ್ರಧಾನಿ ಅಭ್ಯರ್ಥಿಗೆ ಸೂಕ್ತ ಎಂದು ಹೇಳುತ್ತಿರುವುದು ಪಕ್ಷದಲ್ಲೇ ಪ್ರಬಲ ನಾಯಕ ಎಂದೆನಿಸಿಕೊಂಡಿರುವ ಮೋದಿ ವಿರುದ್ಧ ಕತ್ತಿ ಮಸೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮೋದಿ ಅವರಿಗೆ ಬಿಜೆಪಿ ಪ್ರಚಾರ ಸಮಿತಿ ಸಾರಥ್ಯ ವಹಿಸಿದ್ದರಿಂದ ಜೆಡಿಯು ತೀವ್ರ ಮುಜಗರಕ್ಕೆ ಒಳಗಾಗಿಗೆ ಎನ್‌ಡಿಎ ಜತೆಗಿನ 17 ವರ್ಷಗಳ ಮೈತ್ರಿ ಕಡಿದುಕೊಂಡಿತ್ತು.