ತೀರ್ಪು ಮುಂದೂಡುವಂತೆ ಬಾಲಪರಾಧಿ ಮಂಡಳಿಗೆ ಸುಪ್ರೀಂ ಸೂಚನೆ
ನವದೆಹಲಿ: ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲ ಆರೋಪಿ ವಿರುದ್ಧ ಬಾಲಪರಾಧಿ ಮಂಡಳಿ ನಡೆಸಿದ ವಿಚಾರಣೆಯ ತೀರ್ಪನ್ನು ಕಾಯ್ದಿರಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲ ಆರೋಪಿ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಗಿಯುವವರೆಗೂ, ಬಾಲಪರಾಧ ಮಂಡಳಿ ಬಾಲ ಆರೋಪಿ ವಿರುದ್ಧ ಯಾವುದೇ ತೀರ್ಪು ಪ್ರಕಟಿಸಬಾರದು. ತೀರ್ಪನ್ನು ಮುಂದೂಡಬೇಕು ಎಂದು ಸುಪ್ರೀಂ ಮಂಡಳಿಗೆ ಆದೇಶಿಸಿದೆ.
ದೆಹಲಿಯಲ್ಲಿ ಡಿಸೆಂಬರ್ 16ರಂದು ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರು ಆರೋಪಿಗಳಲ್ಲಿ ಬಾಲ ಆರೋಪಿಯು ಭಾಗಿಯಾಗಿದ್ದನು. ಈಗ ಆತನಿಗೆ 18 ವರ್ಷ ತುಂಬಿದೆ. ಆತನ ವಿಚಾರಣೆಯನ್ನು ಬಾಲಪರಾಧ ಮಂಡಳಿಯಲ್ಲಿ ನಡೆಸಿದ್ದು, ತೀರ್ಪು ಪ್ರಕಟಿಸಬೇಕಿದೆ.
ಆದರೆ ಬಾಲ ಆರೋಪಿ ವಿರುದ್ಧ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಅಪರಾಧ ಪ್ರಕರಣದಲ್ಲಿ ಮೂರನೇ ವ್ಯಕ್ತಿ ಬರಲು ಅನುಮತಿ ನೀಡುವುದಿಲ್ಲ ಎಂದು ಹೇಳಿ ಕೇಂದ್ರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸ್ವಾಮಿ ಅವರು ಸುಪ್ರೀಂ ಮೆಟ್ಟಿಲೇರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಪಿ. ಸತಾಶಿವಂ ಅವರನ್ನೊಳಗೊಂಡ ನ್ಯಾಯಾಪೀಠ, ಪಿಐಎಲ್ ಅರ್ಜಿ ವಿಚಾರಣೆ ಮುಗಿಯುವವರೆಗೆ ಬಾಲಪರಾಧ ಮಂಡಳಿ ಯಾವುದೇ ತೀರ್ಪು ಪ್ರಕಟಿಸಬಾರದು ಎಂದು ಸೂಚಿಸಿದ್ದು, ಅರ್ಜಿಯ ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿದೆ.
ಪ್ರಕರಣದ ಬಾಲ ಆರೋಪಿಯನ್ನು ಬಾಲಪರಾಧಿ ಎಂದು ಪರಿಗಣಿಸುವ ಬದಲು ಆತನ ಮಾನಸಿಕ ಮತ್ತು ಬೌದ್ಧಿಕ ಶಕ್ತಿಯನ್ನು ಪರಿಗಣಿಸಿ ತೀರ್ಪು ಪ್ರಕಟಿಸಬೇಕು ಎಂದು ಕೋರಿ ಸ್ವಾಮಿ ಅವರು ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ.