ಆಂಧ್ರ ವಿಭಜನೆ: 2ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
ಆಂಧ್ರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಚನೆಗೆ ಸಮ್ಮತಿ ನೀಡಿದ ಕೇಂದ್ರದ ನಿಲುವನ್ನು ವಿರೋಧಿಸಿ ರಾಯಲ್‌ಸೀಮಾ ಮತ್ತು...
ಹೈದ್ರಾಬಾದ್: ಆಂಧ್ರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ತೆಲಂಗಾಣ ರಚನೆಗೆ ಸಮ್ಮತಿ ನೀಡಿದ ಕೇಂದ್ರದ ನಿಲುವನ್ನು ವಿರೋಧಿಸಿ ರಾಯಲ್‌ಸೀಮಾ ಮತ್ತು ಪ್ರತ್ಯೇಕ ತೆಲಂಗಾಣ ವಿರೋಧಿ ಸಂಘಟನೆ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಎರಡನೇ ದಿನವಾದ ಗುರುವಾರವು ರಾಯಲ್‌ಸೀಮಾ ಮತ್ತು ಸೀಮಾಂಧ್ರದಲ್ಲಿ ಬಂಧ ಘೋಷಿಸಲಾಗಿದ್ದು, ಪ್ರತಿಭಟನೆ ಹೆಚ್ಚಾಗಿದೆ. ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ವಿರೋಧ ವ್ಯಕ್ತಪಡಿಸಿರುವ ರಾಯಲ್ ಸೀಮಾ ಮತ್ತು ಸೀಮಾಂಧ್ರ ಪ್ರದೇಶದ ಜನರು, ಕೂಡಲೇ ಕೇಂದ್ರ ಸರ್ಕಾರ ಪ್ರತ್ಯೇಕ ತೆಲಂಗಾಣ ರಚನೆಯಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ನಾಯಕರ ಪ್ರತಿಕೃತಿಗಳನ್ನು ದಹಿಸಿದ ಪ್ರತಿಭಟನಾಕಾರರು, ಕಾಂಗ್ರೆಸ್ ನಿರ್ಧಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ನಾವು ಆಯ್ಕೆ ಮಾಡಿರುವಂತಹ ಎಲ್ಲಾ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ರಾಜಿನಾಮೆ ನೀಡುವಂತೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ನಮಗೆ ಸಂಯುಕ್ತ ಆಂಧ್ರ ಬೇಕು. ಆಂಧ್ರವನ್ನು ವಿಭಜಿಸಬಾರದು ಎಂದು ಘೋಷಣೆ ಕೂಗುತ್ತಿದ್ದು, ಯುಪಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಲಸೀಮಾ ಜಿಲ್ಲೆಗಳಾದ ಅನಂತಪುರ, ಕಡಪ, ಚಿತ್ತೂರ್ ಮತ್ತು ಕರ್ನೂಲ್ ಜಿಲ್ಲೆಗಳು ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕೆಲವು ಪ್ರದೇಶದಲ್ಲಿದ್ದ ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿ ಮತ್ತು ರಾಜೀವ್‌ಗಾಂಧಿ ಅವರ ಪ್ರತಿಮೆಗಳನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿದ್ದಾರೆ.
ವಿಜವಾಡ ಶಾಖೋತ್ಪನ್ನ ವಿದ್ಯುತ್‌ಜನಕ ಕೇಂದ್ರದ(ವಿಟಿಪಿಎಸ್) ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದೇ ವೇಳೆ ಜನ ಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಹಿಂಜರಿದರೆ, ತಾವು ಮುಷ್ಕರವನ್ನು ಮುಂದುವರೆಸುವುದಾಗಿ ವಿಟಿಪಿಎಸ್ ಕಾರ್ಮಿಕರು ಎಚ್ಚರಿಸಿದ್ದಾರೆ.
ರಾಜ್ಯಕ್ಕೆ ಬೇಕಾಗಿರುವಂತಹ ಶೇಕಡಾ 40 ವಿದ್ಯುತ್ ಉತ್ಪತಿ ಮಾಡಲಾಗುತ್ತಿದೆ.