'ಕ್ಷೀರ ಭಾಗ್ಯ' ಯೋಜನೆಗೆ ಸಿಎಂ ಸಿದ್ದು ಚಾಲನೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕ್ಷೀರ ಭಾಗ್ಯ ಯೋಜನೆಗೆ ಮುಖ್ಯಮಂತ್ರಿ..
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕ್ಷೀರ ಭಾಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು.
ಹೊಸಕೋಟೆಯ ಸರ್ಕಾರಿ ಪ್ರೌಢಶಾಲೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಹಾಲು ಅಮೃತ ಸಮಾನ, ಮಕ್ಕಳು ದೇವರ ಸಮಾನ. ದೇವರಿಗೆ ಸಮಾನರಾದ ಮಕ್ಕಳಿಗೆ ನಾವು ಹಾಲು ನೀಡುತ್ತಿದ್ದೇವೆ ಎಂದರು.
ಈ ಯೋಜನೆಯಿಂದ ಪ್ರತಿ ವರ್ಷ ಸರ್ಕಾರಕ್ಕೆ ಸುಮಾರು 400 ಕೋಟಿ ರುಪಾಯಿ ಹೊರೆಯಾಗಲಿದೆ. ಆದರೂ ಚಿಂತೆಯಿಲ್ಲ. ಈ ಯೋಜನೆ ಮಾತ್ರ ಯಶಸ್ವಿಯಾಗಬೇಕು ಎಂದು ಸಿಎಂ ಹೇಳಿದರು.
ಈ ವೇಳೆ ಸಿಎಂಗೆ ಮೈಸೂರು ಪೇಠ ಹಾಕಿ ಸನ್ಮಾನ ಮಾಡಲಾಯಿತು. ನಂತರ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರು, ಪೇಠ ಹಾಕಿದ್ರೆ ಸಿದ್ದು ಸೇಮ್ ಮಯೂರ ವರ್ಮ...! ಎಂದು ಅವರನ್ನು ಮಯೂರ ವರ್ಮನಿಗೆ ಹೋಲಿಸಿದರು. ಅಲ್ಲದೆ ಸಿದ್ದರಾಮಯ್ಯ ಅವರು ಕಲಿಯೂಗದ ಮಯೂರ ವರ್ಮ ಎಂದು ಹೊಗಳಿದರು.
ರಾಜ್ಯಾದ್ಯಂತ ಇಂದಿನಿಂದ ಕ್ಷೀರ ಭಾಗ್ಯ ಯೋಜನೆ ಜಾರಿಗೆ ಬಂದಿದ್ದು, ಈ ಯೋಜನೆಯಡಿ ವಾರದಲ್ಲಿ ಮೂರು ದಿನ ಮಕ್ಕಳಿಗೆ ಹಾಲು ವಿತರಿಸಲಾಗುವುದು. ರಾಜ್ಯದ ಒಟ್ಟು 51 ಸಾವಿರ ಶಾಲೆಗಳಿಗೆ ಹಾಗೂ 64 ಸಾವಿರ ಅಂಗನವಾಡಿ ಮಕ್ಕಳು ಸೇರಿದಂತೆ ಒಟ್ಟು 65 ಲಕ್ಷ ಮಕ್ಕಳಿಗೆ ಹಾಲಿನ ಭಾಗ್ಯ ದೊರೆಯಲಿದೆ.