ಪ್ರತ್ಯೇಕ ತೆಲಂಗಾಣಕ್ಕೆ ವಿರೋಧ: 14 ಸಚಿವರ ರಾಜಿನಾಮೆ ಸಾಧ್ಯತೆ
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಆಂಧ್ರ ಪ್ರದೇಶದ 14 ಸಚಿವರು ಸೋಮವಾರ ರಾಜಿನಾಮೆ ನೀಡುವ ಸಾಧ್ಯತೆಯಿದೆ...
ಹೈದ್ರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಆಂಧ್ರ ಪ್ರದೇಶದ 14 ಸಚಿವರು ಸೋಮವಾರ ರಾಜಿನಾಮೆ ನೀಡುವ ಸಾಧ್ಯತೆಯಿದೆ.
ಪ್ರತ್ಯೇಕ ತೆಲಂಗಾಣ ರಚನೆಗೆ ಕೇಂದ್ರ ಒಪ್ಪಿಗೆ ನೀಡುತ್ತಿದ್ದಂತೆ ಇತ್ತ ಆಂಧ್ರ ಪ್ರದೇಶದಲ್ಲಿ ಪ್ರತಿಭಟನೆಗಳು ಹೆಚ್ಚಾಗಿ, ರಾಯಲ್ಸೀಮಾ ಮತ್ತು ಸೀಮಾಂಧ್ರದಲ್ಲಿ ಬಂಧ್ ಘೋಷಿಸಲಾಗಿದೆ. ಇದರ ಬೆನ್ನಲ್ಲೆ ಕಾಂಗ್ರೆಸ್ನ 14 ಸಚಿವರು ಕೇಂದ್ರದ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದು, ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನೇತೃತ್ವದ ಕಿರಣ್ಕುಮಾರ್ ರೆಡ್ಡಿ ಸರ್ಕಾರದಲ್ಲಿ 40 ಸಚಿವರಿದ್ದಾರೆ. ಇವರಲ್ಲಿ 14 ಸಚಿವರು ಮತ್ತು 30 ಶಾಸಕರು ಹಾಗೂ 10 ಪರಿಷತ್ ಸದಸ್ಯರು ಇಂದು ಸಂಜೆಯೊಳಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದು, ಮುಖ್ಯಮಂತ್ರಿ ಕಿರಣ್ಕುಮಾರ್ ರೆಡ್ಡಿ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.