ರಾಜಾ ಭಯ್ಯಾಗೆ ಕ್ಲೀನ್ ಚಿಟ್ ನೀಡಿದ ಸಿಬಿಐ
ಲಖನೌ: ಉತ್ತರ ಪ್ರದೇಶದಲ್ಲಿ ನಡೆದ ಡಿಎಸ್ಪಿ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ ಅವರಿಗೆ ಸಿಬಿಐ ಗುರುವಾರ ಕ್ಲೀನ್ ಚಿಟ್ ನೀಡಿದೆ.
ಡಿಎಸ್ಪಿ ಝಿಯಾ-ಉಲ್-ಹಕ್ ಹತ್ಯೆಯ ಹಿಂದೆ ಕ್ರಿಮಿನಲ್ ಸಂಚು ರೂಪಿಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜಾ ಭಯ್ಯಾ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ಡಿಎಸ್ಪಿ ಹತ್ಯೆಗೆ ರಾಜಾ ಭಯ್ಯಾ ಅವರೇ ಕಾರಣ ಎಂದು ಆರೋಪಿಸಿ ಅಧಿಕಾರಿಯ ಪತ್ನಿ ಪರ್ವೀನ್ ಪೊಲೀಸರಿಗೆ ದೂರು ನೀಡಿದ್ದರು. ನನಗೆ ನ್ಯಾಯಾ ದೊರೆಯದಿದ್ದರೆ ಸಿಎಂ ಅಖಿಲೇಶ್ ನಿವಾಸದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬ ಬೆದರಿಕೆ ಹಾಕಿದ್ದರು. ಈ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.
ಡಿಎಸ್ಪಿ ಹತ್ಯೆ ಪ್ರಕರಣದ ಸಂಬಂಧ ಸಿಬಿಐ ಪೂರಕ ಆರೋಪ ಪಟ್ಟಿಯನ್ನು ಇಂದು ಸಲ್ಲಿಸಿದ್ದು, ಇದರಲ್ಲಿ ರಾಜಾ ಭಯ್ಯಾ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಭೂವಿವಾದಕ್ಕೆ ಸಂಬಂಧಿಸಿದಂತೆ ಪ್ರತಾಪ್‌ಗಡದಲ್ಲಿ ಇಬ್ಬರ ಹತ್ಯೆ ನಡೆದಿತ್ತು. ವಿಷಯ ತಿಳಿದೊಡನೆ ಡಿಎಸ್ಪಿ ಹಕ್ ಅವರು ಸ್ಥಳಕ್ಕೆ ಧಾವಿಸಿದ್ದರು. ಈ ವೇಳೆ ಗುಂಪೊಂದು ಡಿಎಸ್ಪಿ ಮೇಲೆ ಹಲ್ಲೆ ನಡೆಸಿ, ನಂತರ ಅವರನ್ನು ಗುಂಡಿಕ್ಕಿ ಹತ್ಯೆಗೈದಿತ್ತು. ಹತ್ಯೆಯು ರಾಜಾ ಭಯ್ಯಾ ಸಚಿವರಿಂದಲೇ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.