ಸುಪ್ರೀಂ ಆದೇಶದ ಬಗ್ಗೆ ಮುಂಗಾರು ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯ
ನವದೆಹಲಿ: ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಒಳಗಾದರೆ ಅಂತಹ ಜನಪ್ರತಿನಿಧಿಗಳ ಸದಸ್ಯತ್ವ ರದ್ದುಗೊಳಿಸಲಾಗುವುದ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ವಿರೋಧ ಪಕ್ಷಗಳು ಗುರುವಾರ ಒತ್ತಾಯಿಸಿವೆ.
ಸುಪ್ರೀಂ ಆದೇಶಕ್ಕೆ ಭಾರತೀಯ ಜನತಾ ಪಕ್ಷ, ಜೆಡಿಯು ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ವಿರೋಧ ವ್ಯಕ್ತಪಡಿಸಿವೆ. ಸುಪ್ರೀಂ ಹೊರಡಿಸಿರುವ ಈ ಆದೇಶವನ್ನು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು. ಈ ಸಂಬಂಧ ಮುಂಗಾರು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸಂಸದರು ಹಾಗೂ ಶಾಸಕರು ಯಾವುದೇ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಒಳಗಾದರೆ ಅಂತಹ ಸಂಸದರ ಹಾಗೂ ಶಾಸಕರ ಸದಸ್ಯತ್ವ ರದ್ದುಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಇದು ಜುಲೈ 10ರಿಂದಲೇ ಜಾರಿಯಲ್ಲಿದೆ.
ಕಾನೂನು ಬಾಹಿರ ಚಟುವಟಿಕೆ ಹಾಗೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ 2 ವರ್ಷ ಹಾಗೂ ಅದಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಒಳಗಾಗುವ ಶಾಸಕರ ಹಾಗೂ ಸಂಸದರ ಸದಸ್ಯತ್ವ ಅನರ್ಹಗೊಳ್ಳಲಿದೆ ಎಂದು ಸುಪ್ರೀಂ ಆದೇಶಿಸಿತ್ತು.
ಆರೋಪ ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಾಯಕರು ಸಹ ಇನ್ನುಮುಂದೆ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಮತ್ತು ಈ ಆದೇಶ ಹಿಂದಿನ ಪ್ರಕರಣಗಳಿಗೆ ಅನ್ವಯಿಸುವುದಿಲ್ಲ, ಭವಿಷ್ಯದಲ್ಲಾಗುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಸುಪ್ರೀಂ ಸ್ಪಷ್ಟಪಡಿಸಿತ್ತು.