ಜೂನ್ ನಲ್ಲಿ ನೀರು ಬಿಡಲು ಅಸಾಧ್ಯ: ಸಿದ್ದರಾಮಯ್ಯ
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡಿಗೆ ಜೂನ್ ತಿಂಗಳಲ್ಲಿ ಹರಿಸಬೇಕಿರುವ ನೀರನ್ನು ಜುಲೈ ತಿಂಗಳಲ್ಲಿ ಹರಿಸಲಾಗುವುದು...
ರಾಯಚೂರ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡಿಗೆ ಜೂನ್ ತಿಂಗಳಲ್ಲಿ ಹರಿಸಬೇಕಿರುವ ನೀರನ್ನು ಜುಲೈ ತಿಂಗಳಲ್ಲಿ ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ರಾಯಚೂರಿನ ಸಮಾರಂಭವೊಂದಕ್ಕೆ ತೆರಳಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಕೇಳಿದಾಗಲೆಲ್ಲ ಕಾವೇರಿ ನೀರನ್ನು ಹರಿಸಲು ಸಾಧ್ಯವಿಲ್ಲ. ಅಲ್ಲದೆ ಜೂನ್ ತಿಂಗಳಲ್ಲಿ ಹರಿಸಬೇಕಿರುವ ನೀರನ್ನು ಜುಲೈನಲ್ಲಿ ಹರಿಸಲಾಗುವುದು ಎಂದು ಖಡಕ್ಕಾಗಿ ಉತ್ತರಿಸಿದರು.
ದೆಹಲಿಯಲ್ಲಿ ನಿನ್ನೆ ನಡೆದ ಕಾವೇರಿ ಮೇಲ್ವಿಚಾರಣಾ ಸಮಿತಿಯ ಸಭೆಯಲ್ಲಿ ತಮಿಳುನಾಡು ಸರ್ಕಾರ ಜೂನ್ ತಿಂಗಳಲ್ಲಿ 10 ಟಿಎಂಸಿ ನೀರು ಬಿಡುವಂತೆ ಒತ್ತಾಯಿಸಿತ್ತು. ತಮಿಳುನಾಡಿಗೆ ನೀರು ಬಿಡುತ್ತೇವೆ. ಆದರೆ ಜೂನ್ ತಿಂಗಳಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಹೀಗಾಗಿ ಜೂನ್ ತಿಂಗಳ ನೀರನ್ನು ಜುಲೈನಲ್ಲಿ ಹರಿಸಲಾಗುವುದು ಎಂದರು.
ಕೇಂದ್ರ ಜಲ ಆಯೋಗದ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ. ನಮಗೆ ಕುಡಿಯಲು ನೀರಿಲ್ಲದಿರುವಾಗ, ತಮಿಳುನಾಡಿಗೆ ನೀರು ಹರಿಸುವಂತೆ ಜಲ ಆಯೋಗ ಸೂಚಿಸುವುದು ಸರಿಯಲ್ಲ. ತಮಿಳುನಾಡು ಸಹ ಪದೇ ಪದೇ ನೀರು ಹರಿಸುವಂತೆ ತಗಾದೇ ತೆಗೆಯುತ್ತಿರವುದು ಎಷ್ಟು ಸರಿ ಎಂದರು.