ಮೋದಿ ನಂ.1, ನಾನು ನಂ.3: ಚೌಹಾಣ್
ಪ್ರಧಾನಿ ಅಭ್ಯರ್ಥಿ ಕುರಿತು ಬಿಜೆಪಿಯಲ್ಲಿ ನಡೆಯುತ್ತಿರುವ ಅಂತರ್ಯುದ್ಧ ಮುಂದುವರೆದಿದ್ದು, ಬಿಜೆಪಿಯಲ್ಲಿ ಗುಜರಾತ್ ಮುಖ್ಯಮಂತ್ರಿ ..
ನವದೆಹಲಿ: ಪ್ರಧಾನಿ ಅಭ್ಯರ್ಥಿ ಕುರಿತು ಬಿಜೆಪಿಯಲ್ಲಿ ನಡೆಯುತ್ತಿರುವ ಅಂತರ್ಯುದ್ಧ ಮುಂದುವರೆದಿದ್ದು, ಬಿಜೆಪಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಂಬರ್ 1, ನಾನು ನಂಬರ್ 3 ಮತ್ತು ಛತ್ತೀಸ್ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ನಂಬರ್ 2 ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ ಹೇಳಿದ್ದಾರೆ.
ಶನಿವಾರವಷ್ಟೇ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಚೌಹಾಣ್ರನ್ನು ಮಾಜಿ ಪ್ರಧಾನಿ ವಾಜಪೇಯಿಗೆ ಹೋಲಿಸಿದ್ದರು. ಇಂದು ಆಡ್ವಾಣಿ ಹೇಳಿಕೆಗೆ ಪ್ರತಿಕ್ರಿಯಿಸಿ ಚೌಹಾಣ್, ಆಡ್ವಾಣಿ ಅವರು ಎಲ್ಲ ಮುಖ್ಯಮಂತ್ರಿಗಳನ್ನು ಶ್ಲಾಘಿಸಿದ್ದಾರೆ. ಅವರು ಪ್ರತ್ಯೇಕವಾಗಿ ಹೇಳಿಲ್ಲ ಎಂದರು.
ಬಿಜೆಪಿ ಆಡಳಿತವಿರುವ ಎಲ್ಲ ಮುಖ್ಯಮಂತ್ರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಎಲ್ಲ ಮುಖ್ಯಮಂತ್ರಿಗಳ ಕೆಲಸದ ಬಗ್ಗೆಯೂ ಆಡ್ವಾಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದನ್ನು ತಪ್ಪಾಗಿ ಅರ್ಥೈಸುವ ಅಗತ್ಯ ಇಲ್ಲ ಎಂದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯ ರೇಸ್ನಲ್ಲಿ ನರೇಂದ್ರ ಮೋದಿ ಅವರು ಮೊದಲ ಸ್ಥಾನದಲ್ಲಿದ್ದರೆ, ರಮಣ್ ಸಿಂಗ್ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ತಾವು ಮೂರನೇ ಸ್ಥಾನದಲ್ಲಿರುವುದಾಗಿ ಚೌಹಾಣ್ ತಿಳಿಸಿದರು.
ಚೌಹಾಣ್ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದಿದ್ದ ಆಡ್ವಾಣಿ, ಮೋದಿ ಅವರು ಗುಜರಾತ್ ಅನ್ನು ಹೆಚ್ಚು ಸಮೃದ್ಧಗೊಳಿಸಿದ್ದಾರೆ ಎಂದು ಹೇಳಿರುವುದಾಗಿ ಬಿಜೆಪಿ ವಕ್ತಾರೆ ಶೈನಾ ಎನ್.ಸಿ ಅವರು ಸ್ಪಷ್ಟನೇ ನೀಡಿದ್ದಾರೆ.