ಆರ್‌ಟಿಐಗೆ ರಾಜಕೀಯ ಪಕ್ಷಗಳು: ಆಯೋಗದ ಕ್ರಮಕ್ಕೆ 'ಕೈ' ವಿರೋಧ
ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ತಂದಿರುವ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ನಿರ್ಧಾರಕ್ಕೆ
ನವದೆಹಲಿ: ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ)ಯಡಿ ತಂದಿರುವ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ದ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇಂತಹ ಕ್ರಮಗಳಿಂದ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಧಕ್ಕೆಯಾಗಲಿದೆ ಎಂದು ಮಂಗಳವಾರ ಹೇಳಿದೆ.
ಸಿಐಸಿ ಕ್ರಮವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಇಂತಹ ಸಾಹಸಿ ಕ್ರಮಗಳಿಂದ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಧಕ್ಕೆಯಾಗಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಕೀಯದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ಇಂತಹದೊಂದು ಕ್ರಾಂತಿಕಾರಿ ಆದೇಶ ನೀಡಿದೆ.
ಆರ್‌ಟಿಐ ಅರ್ಜಿಯೊಂದರಡಿ ಕೇಳಿದ ಪ್ರಶ್ನೆಗಳಿಗೆ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ, ಸಿಪಿಐ, ಎನ್‌ಸಿಪಿ ಮತ್ತು ಬಿಎಸ್ಪಿ ಪಕ್ಷಗಳು ಉತ್ತರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ, ಮಾಹಿತಿ ಆಯುಕ್ತ ಎಂ.ಎಲ್. ಶರ್ಮಾ ಮತ್ತು ಅನ್ನಪೂರ್ಣಾ ದೀಕ್ಷಿತ್ ಅವರಿದ್ದ ಪೂರ್ಣ ಪೀಠ ನಿನ್ನೆ ಸೂಚಿಸಿದೆ.