ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ
ಮಾನಸಿಕ ಒತ್ತಡದಿಂದ ಬಳಲುತಿದ್ದ ಬಾಲಿವುಡ್ ನಟಿ ಜಿಯಾ ಖಾನ್ ಅವರು ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈ: ಮಾನಸಿಕ ಒತ್ತಡದಿಂದ ಬಳಲುತಿದ್ದ ಬಾಲಿವುಡ್ ನಟಿ ಜಿಯಾ ಖಾನ್ ಅವರು ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರ ಮಧ್ಯರಾತ್ರಿ ಮುಂಬೈನಲ್ಲಿರುವ ಜುಹು ನಿವಾಸದಲ್ಲಿ ಜಿಯಾ ಖಾನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಹಲವಾರು ತಿಂಗಳಿನಿಂದ ಜಿಯಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಒಬ್ಬರೇ ವಾಸವಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆಕೆಯ ಮನೆಕಾವಲುಗಾರ, ನೆರೆಮನೆಯವರನ್ನು ಮತ್ತು ಸಂಬಂಧಿಕರನ್ನು ವಿಚಾರಣೆಗೊಳಪಡಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ಮಂಗಳವಾರ ತಿಳಿಸಿದ್ದಾರೆ.
ಕಳೆದ ರಾತ್ರಿ 11 ರ ಸಮಯದಲ್ಲಿ ಜಿಹಾ ಅವರ ತಾಯಿ ಮತ್ತು ಸಹೋದರಿ ಮನೆಗೆ ಬಂದಾಗ ಜಿಯಾ ಅವರು ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಜಿಯಾ ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಹಾಗೂ ಘಟನೆ ಬಗ್ಗೆ ಪೂರ್ಣ ಮಾಹಿತಿ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ರಾಮ್‌ಗೋಪಾಲ್ ವರ್ಮಾ ಅವರ ನಿಶಬ್ಧ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದರ್ಪಣೆ ಮಾಡಿದ ಜಿಯಾ, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚನ್ ಅವರ ಚಿತ್ರದಲ್ಲಿ ನಟಿಸಿದ್ದಾರೆ. ಅಮಿರಖಾನ್ ಅವರ ಗಜನಿ ಚಿತ್ರದಲ್ಲಿ ನಟಿಸಿರುವ ಜಿಯಾ ಅವರಿಗೆ ಫಿಲ್ಮಿಫೇರ್ ಪ್ರಶಸ್ತಿ ಲಭಿಸಿದೆ.
2010ರಲ್ಲಿ ಬಿಡುಗಡೆಯಾದ 'ಹೌಸ್‌ಫುಲ್' ಚಿತ್ರ ಅವರ ಕೊನೆಯ ಚಿತ್ರವಾಗಿದೆ. ಇದರಲ್ಲಿ ಸಹನಟಿಯಾಗಿದ್ದರು.
ಇಂಗ್ಲೆಂಡ್‌ನಲ್ಲಿ ಬೆಳೆದ ಜಿಯಾ ಹಿಂದಿ ಚಿತ್ರಗಳಲ್ಲಿ ನಟಿಸುವ ಆಸೆಯಿಂದ ಮುಂಬೈನಲ್ಲಿ ನೆಲೆಯೂರಿದ್ದರು.