8 ತಿಂಗಳ ಹಿಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದ ಜಿಯಾ
ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ಅವರು ಎಂಟು ತಿಂಗಳ ಹಿಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.
ಪೊಲೀಸರು ಕಲೆ ಹಾಕಿರುವ ಮಾಹಿತಿಗಳ ಪ್ರಕಾರ ಜಿಯಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದು, ಕಳೆದ 8 ತಿಂಗಳ ಹಿಂದೆಯೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಡಿಎನ್ಎ ವರದಿಯಲ್ಲಿ ಜಿಯಾ ಆಯುರ್ವೇದದ ನಿದ್ರೆಗುಳಿಗೆಗಳನ್ನು ಸೇವಿಸುತ್ತಿರುವುದು ತಿಳಿದು ಬಂದಿದ್ದು, ಆಕೆಯ ಮಲಗುವು ಕೋಣೆಯಲ್ಲಿ ನಿದ್ರೆ ಗುಳಿಗೆಗಳು ದೊರಕಿವೆ ಎಂದು ಪೊಲೀಸರು ಹೇಳಿದ್ದಾರೆ.
ಜಿಯಾ ಬಾಯ್ ಫ್ರೆಂಡ್ ಸೂರಜ್ ಪಂಚೋಲಿ ಮೇಲೆ ಯಾವುದೇ ಆರೋಪ ಮಾಡದಿರುವ ಜಿಯಾ ಅವರ ತಾಯಿ, ಕಳೆದ ಹಲವಾರು ತಿಂಗಳಿನಿಂದ ಜಿಯಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು ಎಂದು ಹೇಳಿದ್ದಾರೆ. ಆದರೆ ಪೊಲೀಸರು ಮಾತ್ರ ಬಾಯ್ಫ್ರೆಂಡ್ ಸೂರಜ್ ಪಂಚೋಲಿ ಅವರಿಂದ ಜಿಯಾ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ತನಗೆ ಫಿಲ್ಮ್ ಇಂಡಸ್ಟ್ರೀಯಿಂದ ಯಾವುದೇ ಆಫರ್ ಬಂದಿಲ್ಲ ಎಂದು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎಂದು ಬಾಯ್ ಫ್ರೆಂಡ್ ಸೂರಜ್ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಶವಪರೀಕ್ಷೆ ವರದಿಯ ಪ್ರಕಾರ ಜಿಯಾ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಜಿಯಾಳ ಕತ್ತಿನ ಭಾಗದಲ್ಲಿ ಹಗ್ಗದಿಂದ ಬಿಗಿದಿರುವ ಗುರುತು ಕಂಡು ಬಂದಿದ್ದು,ದೇಹದ ಇತರೆ ಭಾಗದಲ್ಲಿ ಯಾವುದೇ ಗುರುತುಗಳು ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ.
ಕಳೆದ ಸೋಮವಾರ ರಾತ್ರಿ 11ರ ಸಮಯದಲ್ಲಿ ಜಿಯಾ ಖಾನ್ ಆತ್ಮಹತ್ಯೆಗೆ ಶರಣಾಗಿದ್ದರು.