ನಕ್ಸಲ್ ನಿಗ್ರಹಕ್ಕೆ ಕೇಂದ್ರ, ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು: ಪ್ರಧಾನಿ
ನಕ್ಸಲ್ ನಿಗ್ರಹಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು..
ನವದೆಹಲಿ: ನಕ್ಸಲ್ ನಿಗ್ರಹಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಆಂತರಿಕ ಭದ್ರತೆ ಕುರಿತ ಮುಖ್ಯಮಂತ್ರಿಗಳ ವಾರ್ಷಿಕ ಸಭೆಯನ್ನುಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಕ್ಸಲ್ ಪೀಡಿತ 34 ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹಕ್ಕೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.
ಇದೇ ವೇಳೆ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಪ್ರಸ್ತಾಪಿಸಿದ ಸಿಂಗ್, ಮಹಿಳಾ ದೌರ್ಜನ್ಯ ಪ್ರಕರಣಗಳ ತಡೆಗೆ ತಮ್ಮ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ ಎಂದರು.
ಇನ್ನು ಸಭೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ ಅವರು, ಗುಪ್ತಚರ ಮಾಹಿತಿ ವಿನಿಮಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಹಕಾರ ಇದ್ದರೆ ನಕ್ಸಲ್ ಚಟುವಟಿಕೆ ನಿಯಂತ್ರಣ ಸಾಧ್ಯ ಎಂದರು.
ಈ ವೇಳೆ ಛತ್ತೀಸ್‌ಗಡ ನಕ್ಸಲ್ ದಾಳಿಯನ್ನು ಪ್ರಸ್ತಾಪಿಸಿದ ಶಿಂಧೆ, ಅದೊಂದು ಪ್ರಜಾಪ್ರಭುತ್ವದ ಹಾಗೂ ರಾಜಕೀಯ ಪಕ್ಷದ ಚಟುವಟಿಕೆಯಲ್ಲಿ ಭಾಗವಹಿಸಿದ ಜನರ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದರು.
ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿದ್ದಾರೆ. ಇನ್ನು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳಾದ ಗುಜರಾತ್‌ನ ನರೇಂದ್ರ ಮೋದಿ, ಬಿಹಾರದ ನಿತಿಶ್ ಕುಮಾರ್, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್‌ಗಡ ರಮಣ್ ಸಿಂಗ್, ಒಡಿಸ್ಸಾದ ನವೀನ್ ಪಟ್ನಾಯಕ್ ಮತ್ತು ಜಮ್ಮು ಕಾಶ್ಮೀರದ ಒಮರ್ ಅಬ್ದುಲ್ಲಾ ಅವರು ಭಾಗವಹಿಸಿದ್ದಾರೆ.
ಈ ಮಧ್ಯೆ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಂತರಿಕ ಭದ್ರತೆ ಕುರಿತ ಮುಖ್ಯಮಂತ್ರಿಗಳ ಸಭೆಗೆ ಗೈರು ಆಗಿದ್ದಾರೆ.