ಷೇರು ವ್ಯವಹಾರ: ಬಾಯಿ ಬಿಡದ ಧೋನಿ
ವಿವಾದಕ್ಕಿಡಾಗಿರುವ ರಿತಿ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಧೋನಿ ಷೇರು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ...
ಲಂಡನ್: ವಿವಾದಕ್ಕಿಡಾಗಿರುವ ರಿತಿ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಧೋನಿ ಷೇರು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮೌನಕ್ಕೆ ಶರಣಾಗಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಂಡಿರುವ ಭಾರತ ತಂಡ ನಾಳೆ ದಕ್ಷಿಣ ಆಫ್ರಿಕಾ ತಂಡದ ವಿರುದ್ದ ನಾಳೆ ತನ್ನ ಪ್ರಥಮ ಪಂದ್ಯವನ್ನಾಡಲಿದೆ. ಈ ಹಿನ್ನೆಲೆಯಲ್ಲಿ ಲಂಡನ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧೋನಿ, ಭಾರತ ತಂಡ ಪಂದ್ಯ ಗೆಲ್ಲುವಲ್ಲಿ ಮಾತ್ರ ತನ್ನ ಗಮನ ಹರಿಸಲಿದೆ ಎಂದಷ್ಟೇ ಹೇಳಿ ಮೌನಕ್ಕೆ ಶರಣಾದರು. ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ರಿತಿ ಸ್ಪೋರ್ಟ್ಸ್ ಷೇರು ವ್ಯವಹಾರದ ಕುರಿತು ಧೋನಿ ಮಾತನಾಡಲಿಲ್ಲ. ಇದರಿಂದ ಬಾರಿ ವಿವಾದಕ್ಕಿಡಾಗಿರುವ ಧೋನಿ ಷೇರು ವ್ಯವಹಾರ ಪ್ರಕರಣ ಮತ್ತಷ್ಟು ದಿನ ಗೊಂದಲದಲ್ಲೇ ಮುಂದುವರೆಯಲಿದೆ.
ಧೋನಿ ಮತ್ತು ಭಾರತ ಕ್ರಿಕೆಟ್ ತಂಡದ ಇತರೆ ಮೂವರು ಆಟಗಾರರು ರಿತಿ ಸ್ಪೋರ್ಟ್ಸ್ ಸಂಸ್ಥೆಯಲ್ಲಿ ಬ್ರ್ಯಾಂಡ್ ಅಂಬಾಸಿಡರ್ಗಳಾಗಿದ್ದು, ಇದೇ ಸಂಸ್ಥೆಯಲ್ಲಿ ಧೋನಿ ಷೇರು ಹೊಂದಿದ್ದಾರೆ. ಈ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.
ಧೋನಿ ಆಪ್ತ ಸ್ನೇಹಿತರಾದ ಅರುಣ್ ಪಾಂಡೆ ಅವರ ಒಡೆತನದ ರಿತಿ ಸ್ಪೋರ್ಟ್ಸ್ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಧೋನಿ, ಇದೇ ಸಂಸ್ಥೆಯಲ್ಲಿ ಶೇ. 15 ರಷ್ಟು ಷೇರು ಹೊಂದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. 2010ರಲ್ಲಿ ರಿತಿ ಸ್ಪೋರ್ಟ್ಸ್ ಸಂಸ್ಥೆಯೊಂದಿಗೆ ಧೋನಿ ಅವರು 3 ವರ್ಷದ ಅವಧಿಗೆ ಸುಮಾರು 210 ಕೋಟಿ ರು.ಗಳ ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಪ್ರತಿವರ್ಷ ಸುಮಾರು 70 ಕೋಟಿ ರು.ಗಳಷ್ಟು ಭಾರಿ ಮೊತ್ತ ಇವರಿಗೆ ಸಂದಾಯವಾಗುತ್ತದೆ. ಇದು ಭಾರತ ತಂಡದ ಆಟಗಾರನೊಬ್ಬನ ಗರಿಷ್ಟ ವಾರ್ಷಿಕ ಆದಾಯವಾಗಿದೆ.