ಸ್ಪಾಟ್ ಫಿಕ್ಸಿಂಗ್: ರಾಜಸ್ಥಾನ ರಾಯಲ್ಸ್ ಮಾಲಿಕ ರಾಜ್ ಕುಂದ್ರಾ ವಿಚಾರಣೆ
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ರಾಜಸ್ಥಾನ್ ರಾಯಲ್ಸ್ ಮಾಲಿಕ ರಾಜಕುಂದ್ರಾ ಅವರನ್ನು ದೆಹಲಿ..
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ರಾಜಸ್ಥಾನ್ ರಾಯಲ್ಸ್ ಮಾಲಿಕ ರಾಜಕುಂದ್ರಾ ಅವರನ್ನು ದೆಹಲಿ ಪೊಲೀಸರು ಬುಧವಾರ ವಿಚಾರಣೆಗೊಳಪಡಿಸಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಸಂಬಂಧ ಬಂಧನಕ್ಕೊಳಗಾಗಿರುವ ರಾಜಸ್ಥಾನ ರಾಯಲ್ಸ್‌ನ ಆಟಗಾರರ ಮಾಹಿತಿ ಮತ್ತು ಐಪಿಎಲ್‌ನಲ್ಲಿ ಅವರ ಒಪ್ಪಂದದ ಅವಧಿ ಹಾಗೂ ಇತರೆ ತನಿಖೆಗೆ ಸಂಬಂಧ ಪಟ್ಟಂತೆ ಮಾಹಿತಿ ನೀಡುವಂತೆ ರಾಜ್‌ಕುಂದ್ರಾ ಅವರಿಗೆ ದೆಹಲಿ ಪೊಲೀಸರು ಕರೆ ನೀಡಿದ್ದರು.
ಇಂದು ಬೆಳಿಗ್ಗೆ ಕುಂದ್ರಾ ಅವರು ಲೋದಿ ರಸ್ತೆಯಲ್ಲಿರುವ ವಿಶೇಷ ದೆಹಲಿ ಪೊಲೀಸ್ ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ದೆಹಲಿ ಪೊಲೀಸರು, ಕ್ರಿಕೆಟಿಗ ಶ್ರೀಶಾಂತ್ ವಿರುದ್ಧ ಮೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭೂಗತ ಜಗತ್ತಿನ ಪಾತಕಿ ದಾವುದ್ ಭಾಗಿಯಾಗಿರುವುದು ಸ್ಪಷ್ಟವಾಗಿರುವುದರಿಂದ ಪ್ರಕರಣವನ್ನು ಬಲಪಡಿಸುವ ಉದ್ದೇಶದಿಂದ ದೆಹಲಿ ಪೊಲೀಸರು ಶ್ರೀಶಾಂತ್ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಬಂಧನಕ್ಕೀಡಾಗಿರುವ ಇತರೆ 25 ಆರೋಪಿಗಳ ವಿರುದ್ಧ ಮೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಈ ಕಾಯ್ದೆ ಪ್ರಕಾರ ತಪ್ಪೊಪ್ಪಿಗೆ ನೀಡುವ ಆರೋಪಿಗಳು ಅಥವಾ ಸಾಕ್ಷಿಗಳು ನ್ಯಾಯಾಲಯಕ್ಕೆ ಹಾಜರಾಗುವು ಮುನ್ನ ಉಪ ಪೊಲೀಸ್ ಆಯುಕ್ತ ಅಥವಾ ಅದೇ ಸ್ಥಾನದ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಬೇಕಿದೆ. ಇದರಿಂದ ಆರೋಪಿಗಳು ಮತ್ತು ಸಾಕ್ಷಿಗಳು ತನಿಖಾಧಿಕಾರಿಗಳ ದಿಕ್ಕು ತಪ್ಪಿಸುವ ಪ್ರಯತ್ನಕ್ಕೆ ಕಡಿವಾಣ ಬೀಳುತ್ತದೆ.