1 ತಿಂಗಳಲ್ಲಿ ಬಿಜೆಪಿ ರಾಜ್ಯ ಘಟಕ ಪುನಾರಚನೆ
ಮುಂದಿನ ಒಂದು ತಿಂಗಳೊಳಗಾಗಿ ಬಿಜೆಪಿ ರಾಜ್ಯ ಘಟಕವನ್ನು ಪುನಾರಚನೆ ಮಾಡಲು ಗುರುವಾರ ನಡೆದ ಬಿಜೆಪಿ ವಿಶೇಷ ಸಭೆ ..
ಬೆಂಗಳೂರು: ಮುಂದಿನ ಒಂದು ತಿಂಗಳೊಳಗಾಗಿ ಬಿಜೆಪಿ ರಾಜ್ಯ ಘಟಕವನ್ನು ಪುನಾರಚನೆ ಮಾಡಲು ಗುರುವಾರ ನಡೆದ ಬಿಜೆಪಿ ವಿಶೇಷ ಸಭೆ ನಿರ್ಧರಿಸಿದೆ.
ಮಲ್ಲೇಶ್ವರಂನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಥಾವರ್ಚಂದ ಗೆಹ್ಲೋಟ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಬಿಜೆಪಿ ವಿಶೇಷ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಮಂಡಲ, ಜಿಲ್ಲೆ ಹಾಗೂ ತಾಲೂಕು ಘಟಕಗಳನ್ನು ಪುನಾರಚನೆ ಮಾಡಲು ತೀರ್ಮಾನಿಸಲಾಯಿತು.
ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ, ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ.ಶ್ರೀರಾಮುಲು ಅವರನ್ನು ಬಿಜೆಪಿಗೆ ವಾಪಸ್ ಕರೆ ತರುವ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಆದರೆ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆ ತರಬೇಕು ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಪಕ್ಷದ ಹೈಕಮಾಂಡ್ಗೆ ಪತ್ರ ಬರೆದಿದ್ದ ಪರಿಷತ್ ಸದಸ್ಯ ಗೋ. ಮಧುಸೂದನ್ ವಿರುದ್ಧ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಕೆಂಡಾಮಂಡಲವಾದರು ಎನ್ನಲಾಗಿದೆ. ಅಲ್ಲದೆ ಬಿಜೆಪಿಯ ಇತರೆ ನಾಯಕರೂ ಸಹ ಮಧುಸೂದನ್ ಅವರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಇನ್ನು ಹೈಕಮಾಂಡ್ಗೆ ಪತ್ರ ಬರೆದ ಮಧುಸೂದನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಅಲ್ಲದೆ ಅವರಿಗೆ ಅಮಾನತು ಮಾಡುವು ಎಚ್ಚರಿಕೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.