'ಉಗ್ರ' ಪ್ರಕರಣ ಹಿಂಪಡೆಯುವ ಯುಪಿ ನಿರ್ಧಾರಕ್ಕೆ ಹೈಕೋರ್ಟ್ ತಡೆ
ಆಡಳಿತರೂಢ ಸಮಾಜವಾದಿ ಪಕ್ಷಕ್ಕೆ ಶುಕ್ರವಾರ ಭಾರಿ ಹಿನ್ನೆಡೆಯಾಗಿದೆ. ಶಂಕಿತ ಉಗ್ರರ ವಿರುದ್ಧ ದಾಖಲಾಗಿರುವ..
ಲಖನೌ: ಆಡಳಿತರೂಢ ಸಮಾಜವಾದಿ ಪಕ್ಷಕ್ಕೆ ಶುಕ್ರವಾರ ಭಾರಿ ಹಿನ್ನೆಡೆಯಾಗಿದೆ. ಶಂಕಿತ ಉಗ್ರರ ವಿರುದ್ಧ ದಾಖಲಾಗಿರುವ ಭಯೋತ್ಪಾದನಾ ಪ್ರಕರಣಗಳನ್ನು ಹಿಂಪಡೆಯುವ ಅಖಿಲೇಶ್ ಯಾದವ್ ಸರ್ಕಾರದ ನಿರ್ಧಾರಕ್ಕೆ ಉತ್ತರ ಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಅಲಹಬಾದ್ ಹೈಕೋರ್ಟ್ನ ಲಖನೌ ಪೀಠ, ಉತ್ತರ ಪ್ರದೇಶ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿ, ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು.
ಈ ಮುಂಚೆ ಕೋರ್ಟ್, ಭಯೋತ್ಪದನಾ ಪ್ರಕರಣಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿತ್ತು. ಅಲ್ಲದೇ ಉಗ್ರ ನಿಗ್ರಹ ಕಾಯ್ದೆ ಕೇಂದ್ರ ಸರ್ಕಾರದ ಕಾನೂನಾಗಿದ್ದು, ಈ ಬಗ್ಗೆ ಸ್ಪಷ್ಟಿಕರಣ ನೀಡುವಂತೆ ಸೂಚಿಸಿತ್ತು. ಆ ಬಗ್ಗೆ ಇಂದು ಸರ್ಕಾರ ಪ್ರತಿಕ್ರಿಯೆ ಸಲ್ಲಿಸಿದ ನಂತರ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ಕಳೆದ ವರ್ಷ ವಿಧಾನಸಭೆ ಚುನಾವಣೆ ವೇಳೆ, ಮಾಯಾವತಿ ಆಡಳಿತದಲ್ಲಿ ಅಮಾಯಕ ಮುಸ್ಲಿಂ ಯುವಕರ ಮೇಲೆ ದಾಖಲಾಗಿರುವ ಭಯೋತ್ಪದನಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಸಮಾಜವಾದಿ ಪಕ್ಷ ಭರವಸೆ ನೀಡಿತ್ತು. ಅದರಂತೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ ನಂತರ, ಗೋರಖಪುರ್, ಲಖನೌ ಮತ್ತು ಫೌಜಾಬಾದ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಖಲಿದ್ ಮುಜಾಹಿದ್ ವಿರುದ್ಧ ಭಯೋತ್ಪದನಾ ಪ್ರಕರಣ ಹಿಂಪಡೆಯಲು ಸರ್ಕಾರ ಆದೇಶಿಸಿತ್ತು.