ಮೋದಿಗೆ ಚುನಾವಣಾ ಪ್ರಚಾರ ಸಾರಥ್ಯ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 2014 ಲೋಕಸಭೆ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಭಾನುವಾರ ಆಯ್ಕೆಯಾಗಿದ್ದಾರೆ.
ಪಣಜಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 2014 ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಭಾನುವಾರ ಆಯ್ಕೆಯಾಗಿದ್ದಾರೆ.
ಪಣಜಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು, ಮುಂಬರುವ ಲೋಕಸಭೆ ಚುನಾವಣಾ ಪ್ರಚಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮೋದಿಗೆ ಚುನಾವಣೆ ಪ್ರಚಾರದ ಅಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಸಹ ಒಪ್ಪಿಗೆ ಸೂಚಿಸಿದ್ದು, ಇದು ಮೋದಿ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮೋದಿಗೆ ಪ್ರಚಾರ ಸ್ಥಾನ ನೀಡುವಲ್ಲಿ ರಾಜನಾಥ್ ಸಿಂಗ್ ಅವರ ಪಾತ್ರ ದೊಡ್ಡದಾಗಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಮೋದಿ ಅವರ ಮೇಲಿದೆ. ಮೋದಿ ಅವರಿಗೆ ನೀಡಿರುವ ಜವಾಬ್ದಾರಿಯನ್ನು ಸಕ್ರಿಯವಾಗಿ ನಿರ್ವಹಿಸಲ್ಲಿದ್ದು, ಚುನಾವಣೆಯಲ್ಲಿ ಪಕ್ಷ ಗೆದ್ದೆ ಗೆಲ್ಲುತ್ತದೆ ಎಂದು ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಕ್ಷದ ಹಿರಿಯ ನಾಯಕರ ವಿರೋಧದಲ್ಲೂ ಮೋದಿ ಅವರಿಗೆ ಅಧ್ಯಕ್ಷ ಸ್ಥಾನ ಲಭಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಮೋದಿಗೆ ಚುನಾವಣಾ ಪ್ರಚಾರದ ಹೊಣೆಗಾರಿಕೆ ನೀಡದಂತೆ ಪಕ್ಷದ ಹಿರಿಯ ನಾಯಕ ಅಡ್ವಾಣಿ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮೂರು ದಿನಗಳಿಂದ ಗೋವಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಸಹ ಅನಾರೋಗ್ಯದ ನೆಪ ಒಡ್ಡಿ ಗೈರಾಗಿದ್ದರು.
ಬಿಜೆಪಿಯ ಜಸ್ವಂತ್ ಸಿಂಗ್, ಶತ್ರುಘ್ನ ಸಿನ್ಹಾ, ಯಶವಂತ ಸಿನ್ಹಾ, ರವಿಶಂಕರ್ ಪ್ರಸಾದ್, ಉಮಾಭಾರತಿ ಸೇರಿದಂತೆ ಹಲವಾರು ನಾಯಕರು ಕಾರ್ಯಕಾರಿಣಿಗೆ ಗೈರಾಗಿದ್ದಾರೆ. ಇವರೂ ಕೂಡ ಆಡ್ವಾಣಿ ಅನುಪಸ್ಥಿತಿಯಲ್ಲಿ ಪಕ್ಷ ದೊಡ್ಡ ಮಟ್ಟದ ನಿರ್ಧಾರ ತೆಗೆದುಕೊಳ್ಳುವಂತಿಲ್ಲ ಎಂದಿದ್ದಾರೆ.