ಶ್ರೀಲಂಕಾ ಸೇನಾ ಪಡೆಗೆ ತರಬೇತಿ: ಕೇಂದ್ರದ ವಿರುದ್ಧ ಜಯಾ ಕಿಡಿ
ಶ್ರೀಲಂಕಾ ರಕ್ಷಣಾ ಅಧಿಕಾರಿಗಳಿಗೆ ಭಾರತದಲ್ಲಿ ತರಬೇತಿ ನೀಡುವುದರ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಮುಖ್ಯಮಂತ್ರಿ ...
ಚೆನ್ನೈ: ಶ್ರೀಲಂಕಾ ರಕ್ಷಣಾ ಅಧಿಕಾರಿಗಳಿಗೆ ಭಾರತದಲ್ಲಿ ತರಬೇತಿ ನೀಡುವುದರ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಭಾನುವಾರ ಕಿಡಿಕಾರಿದ್ದಾರೆ.
ಎಲ್‌ಟಿಟಿಇ ಸಂಘನೆಯ ಸದಸ್ಯರು ಎಂದು ಶಂಕಿಸಿ ತಮಿಳರ ಮೇಲೆ ಶ್ರೀಲಂಕಾ ಸೇನೆ ಹಿಂಸಾಚಾರವನ್ನು ನಡೆಸುತ್ತಿದೆ. ತಮಿಳರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ತಮಿಳರ ಮೇಲಿನ ದೌರ್ಜನ್ಯ ನಿಲ್ಲುವವರೆಗೆ ಶ್ರೀಲಂಕಾ ಸೇನೆಗೆ ಭಾರತದಲ್ಲಿ ತರಬೇತಿ ನೀಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಶ್ರೀಲಂಕಾದಲ್ಲಿನ ನಾಗರಿಕ ಯುದ್ಧವು 2009ರಲ್ಲಿ ಕೊನೆಗೊಂಡರೂ ಭದ್ರತಾ ಪಡೆಗಳು ತಮಿಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಲೇ ಇವೆ. ಶ್ರೀಲಂಕಾ ತಮಿಳರ ಮಾನವಹಕ್ಕುಗಳಿಗೆ ತೀವ್ರ ತೊಂದರೆಯಾಗಿರುವುದರಿಂದ ಭಾರತ ಶ್ರೀಲಂಕಾ ವಿರುದ್ಧ ಕಟು ಶಬ್ದಗಳ ನಿರ್ಣಯ ಕೈಗೊಳ್ಳಬೇಕು.
ಈ ಸಂಬಂಧ ಈಗಾಗಲೇ ಎರಡು ಬಾರಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ. ಆದರೆ ತಮ್ಮ ಮನವಿ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು, ಶ್ರೀಲಂಕಾ ಸೇನಾ ಪಡೆಗಳಿಗೆ ತರಬೇತಿ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ಸೇನಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ಎಂಎಸ್ ಬಂದರ ದಸ್ಸಾನಾಯ್ಕೆ ಮತ್ತು ಮೇಜರ್ ಸಿಎಸ್ ಹರೀಶ್ಚಂದ್ರ ಹೆಟ್ಟಿರಾಚ್ಚಿಗೆ ಅವರಿಗೆ ವಿಲ್ಲಿಂಗ್‌ಟನ್‌ನಲ್ಲಿ ತರಬೇತಿ ನೀಡಲು ಭಾರತ ಮುಂದಾಗಿದೆ. ತಮಿಳರ ಭಾವನೆ ಜೊತೆ ಕೇಂದ್ರ ಸರ್ಕಾರ ಆಟವಾಡುತ್ತಿದೆ ಎಂದು ಜಯಾ ಕಿಡಿಕಾರಿದ್ದಾರೆ.
ತಮಿಳರ ಮೇಲಿನ ದೌರ್ಜನ್ಯ ಪೂರ್ಣವಾಗಿ ನಿಲ್ಲುವವರೆಗೂ, ಭಾರತ ಶ್ರೀಲಂಕಾ ಸೇನಾ ಪಡೆಗೆ ತರಬೇತಿ ನೀಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಜಯಾ ಒತ್ತಾಯಿಸಿದ್ದಾರೆ.