ಚೆನ್ನೈ ಪೊಲೀಸರಿಂದ ವಿಕ್ರಂ ವಿಚಾರಣೆ
ಚೆನ್ನೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೋಟೆಲ್ ಉದ್ಯಮಿ ವಿಕ್ರಂ ಅಗರವಾಲ ಅವರನ್ನು ಸೋಮವಾರ ತಮಿಳುನಾಡಿನ ಕ್ರೈಂ ಬ್ರಾಂಚ್ ಸಿಐಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಚೆನ್ನೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ವಿಕ್ರಂ ಅಗರವಾಲ ಅವರು ಐಪಿಎಲ್ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಲು ಬುಕ್ಕಿಗಳಿಗೆ ತಮ್ಮ ಹೋಟೆಲ್ನಲ್ಲಿ ಅವಕಾಶ ನೀಡಿದ್ದರು ಎಂಬ ಆರೋಪದ ಮೇಲೆ ಕ್ರೈಂ ಬ್ರ್ಯಾಂಚ್ ಪೊಲೀಸರು ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಈ ಸಂಬಂಧ ಇಂದು ಪೊಲೀಸರ ಮುಂದೆ ಹಾಜರಾದ ಅಗರವಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಸಂಬಂಧ, ಬುಕ್ಕಿಗಳು ಹಾಗೂ ಆಟಗಾರರಿಗೆ ವ್ಯವಹಾರ ನಡೆಸಲು ವಿಕ್ರಂ ಅಗರವಾಲ ತಮ್ಮ ಹೋಟೆಲ್ನಲ್ಲಿ ಅವಕಾಶ ನೀಡಿದ್ದರು. ಹೀಗಾಗಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ವಿಕ್ರಂ ಅವರಿಗೆ ಶುಕ್ರವಾರ ಸಮನ್ಸ್ ಜಾರಿ ಮಾಡಿದ್ದರು.
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಕೆಲ ಆಟಗಾರರನ್ನು ಹಾಗೂ ಬುಕ್ಕಿಗಳನ್ನು ಬಂಧಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಬುಕ್ಕಿಗಳು ಚೆನ್ನೈನ ಹೋಟೆಲ್ವೊಂದರಲ್ಲಿ ವ್ಯವಹಾರ ನಡೆಸಿದ್ದಾಗಿ ಮಾಹಿತಿ ನೀಡಿದ್ದರು. ಅದರಂತೆ ಹೋಟೆಲ್ ಮೇಲೆ ದಾಳಿ ಮಾಡಿದ್ದ ದೆಹಲಿ ಪೊಲೀಸರು ಮೇ 31ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಆರೋಪಿ ಚೆನ್ನೈ ಸೂಪರ್ ಕಿಂಗ್ಸ್ (ಸಿಕೆಎಸ್)ನ ಮಾಲೀಕ ಗುರುನಾಥ್ ಮೇಯಪ್ಪನ್ನ ಸ್ನೇಹಿತರಾಗಿರುವ ವಿಕ್ರಂ ಅಗರವಾಲ, ಸ್ಪಾಟ್ ಫಿಕ್ಸಿಂಗ್ ಸಂಬಂಧ ವ್ಯವಹಾರ ನಡೆಸಲು ಬುಕ್ಕಿಗಳಿಗೆ ಅವಕಾಶ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.