ಪ್ರಧಾನಿ ಅಭ್ಯರ್ಥಿ ಬಿಕ್ಕಟ್ಟು; ಶೀಘ್ರದಲ್ಲೇ ನಿರ್ಧಾರ: ನಿತೀಶ್
ಪಾಟ್ನಾ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವ ಬಿಜೆಪಿಯ ಕ್ರಮವನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ಖಂಡಿಸಿದ್ದು, ಈ ಬಗ್ಗೆ ಜೆಡಿಯು ಪಕ್ಷ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಪಾಟ್ನಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮೋದಿ ಅವರಿಗೆ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದು, ಪ್ರಧಾನಿ ಅಭ್ಯರ್ಥಿಗೆ ಸೂಕ್ತ ವ್ಯಕ್ತಿ ಯಾರು ಎಂಬುದನ್ನು ಈಗಲೇ ನಿರ್ಣಯಿಸುವುದು ಕಷ್ಟ. ಹೀಗಾಗಿ ಮುಂದಾಗುವ ಸಾಧಕ ಬಾಧಕಗಳನ್ನು ಕೂಲಂಕುಷವಾಗಿ ಚರ್ಚಿಸಿದ ನಂತರ ಜೆಡಿಯು ತನ್ನ ನಿಲುವನ್ನು ಪ್ರಕಟಿಸಲಿದೆ ಎಂದು ಹೇಳಿದ್ದಾರೆ.
ಮೋದಿ ಅವರನ್ನು ಬಿಜೆಪಿಯ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸುತ್ತಿರುವ ಬಿಜೆಪಿ ನಿಲುವು ಸರಿಯಲ್ಲ. ಪ್ರಧಾನಿ ಅಭ್ಯರ್ಥಿ ಎಂಬ ದೃಷ್ಠಿಕೋನ ಹೊಂದಿರುವ ಬಿಜೆಪಿ, ಮೋದಿಗೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಜೆಡಿಯು ಮುಂದಿನ ದಿನಗಳಲ್ಲಿ ಯಾವ ನಿಲುವನ್ನು ಕೈಗೊಳ್ಳಲಿದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ನಿಮ್ಮ ಪ್ರತಿಯೊಂದು ಪ್ರಶ್ನೆಗಳಿಗೂ ಜೆಡಿಯು ಸೂಕ್ತ ಉತ್ತರ ನೀಡಲಿದೆ ಅಲ್ಲಿಯವರೆಗೂ ಕಾಯಿರಿ ಎಂದು ಹೇಳಿದ್ದಾರೆ.
ಮೋದಿ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಮುನ್ನ ನಮ್ಮ ಮೈತ್ರಿ ಪಕ್ಷಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಬಿಜೆಪಿ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಸದ್ಯ ನಾನು ಸೇವಾಯಾತ್ರೆ ಕಾರ್ಯಕ್ರಮ ಕೈಗೊಂಡಿದ್ದರಿಂದ ನಾನು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಹೀಗಾಗಿ ರಾಜನಾಥ್ ಸಿಂಗ್ ಹಾಗೂ ನನ್ನ ಮಧ್ಯೆ ಯಾವುದೇ ರೀತಿಯ ಮಾತುಕತೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.