ಬಿಜೆಪಿ ಸೇರ್ಪಡೆಗೆ ಬಿಎಸ್‌ವೈ ಒಲವು?
ಬಿಜೆಪಿಯಲ್ಲಿ ತಮ್ಮ ಸ್ಥಾನ ಏನು ಎಂಬುದು ನಿರ್ಧಾರವಾಗಬೇಕು ಮತ್ತು ಬಿಜೆಪಿಯಲ್ಲಿ ತಮ್ಮ ಸ್ಥಾನಮಾನ ಬದಲಾಗಬಾರದು...
ಬೆಂಗಳೂರು: 2014 ಲೋಕಸಭಾ ಚುನಾವಣೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ನೇತೃತ್ವ ನೀಡುತ್ತಿದ್ದಂತೆ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರು ಪಕ್ಷದ ಮೂರು ಪ್ರಮುಖ ಹುದ್ದೆಗಳಿಗೆ ರಾಜಿನಾಮೆ ನೀಡುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ಸಖ್ಯ ಬೆಳೆಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಇದಕ್ಕೆ ಪೂರಕವೆಂಬಂತ್ತೆ ಇಂದು ಬಿಜೆಪಿಗೆ ಮರಳುವ ಬಗ್ಗೆ ಮಾಧ್ಯಮಗಳ ಮುಂದೆ ಅನೌಪಚಾರಿಕ ಚರ್ಚೆ ನಡೆಸಿದ ಯಡಿಯೂರಪ್ಪ, ತಕ್ಷಣಕ್ಕೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಆದರೆ ಇದಕ್ಕೆಲ್ಲ ಸುಮಾರು ಎರಡು ತಿಂಗಳ ಕಾಲಾವಕಾಶ ಬೇಕು ಎಂದಿದ್ದಾರೆ. ಅಲ್ಲದೆ ಬಿಜೆಪಿಯಲ್ಲಿ ತಮ್ಮ ಸ್ಥಾನ ಏನು ಎಂಬುದು ನಿರ್ಧಾರವಾಗಬೇಕು ಮತ್ತು ಬಿಜೆಪಿಯಲ್ಲಿ ತಮ್ಮ ಸ್ಥಾನಮಾನ ಬದಲಾಗಬಾರದು ಹಾಗೂ ತಮ್ಮ ಪ್ರತಿಷ್ಠೆಗೆ ಧಕ್ಕೆಯಾಗಬಾರದು ಎಂದು ಹೇಳುವ ಮೂಲಕ ಬಿಜೆಪಿ ಸೇರ್ಪಡೆಗೆ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲು ಮತ್ತು ಅವರಿಗೆ ಬಿಜೆಪಿಯಲ್ಲಿ ಯಾವುದೇ ಹುದ್ದೆ ಸಿಗದಂತೆ ಆಗಲು ಆಡ್ವಾಣಿ ಮತ್ತು ಸಂಸದ ಅನಂತಕುಮಾರ್ ಅವರೇ ಕಾರಣ. ಅನಂತಕುಮಾರ್ ಅವರು ಆಡ್ವಾಣಿ ಅವರ ಕಿವಿಚುಚ್ಚಿ ಯಡಿಯೂರಪ್ಪ ಪಕ್ಷ ತ್ಯಜಿಸುವಂತೆ ಮಾಡಿದ್ದರು. ಇದೀಗ ಆಡ್ವಾಣಿ ಅವರೇ ಪಕ್ಷದಿಂದ ದೂರವಾರುತ್ತಿರುವುದರಿಂದ ಮತ್ತು ತಮ್ಮ ಬಗ್ಗೆ ಮೃದು ಧೋರಣೆ ಹೊಂದಿರುವ ಮೋದಿಗೆ ಪಕ್ಷದ ನೇತೃತ್ವ ನೀಡಿರುವುದರಿಂದ ಯಡಿಯೂರಪ್ಪ ಬಿಜೆಪಿಗೆ ಮರಳುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.