ಜಗತ್ತಿನ ಹಿಂಸಾತ್ಮಕ ರಾಷ್ಟ್ರಗಳಲ್ಲಿ ಭಾರತಕ್ಕೆ 20ನೇ ಸ್ಥಾನ
ಜಗತ್ತಿನ ವಿವಿಧ ದೇಶಗಳಲ್ಲಿ ನಡೆಯುವ ಹಿಂಸಾಚಾರ ಕೃತ್ಯಗಳ ಸಂಬಂಧ ಜಾಗತಿಕ ಶಾಂತಿ..
ಮುಂಬೈ: ಜಗತ್ತಿನ ವಿವಿಧ ದೇಶಗಳಲ್ಲಿ ನಡೆಯುವ ಹಿಂಸಾಚಾರ ಕೃತ್ಯಗಳ ಸಂಬಂಧ ಜಾಗತಿಕ ಶಾಂತಿ ಸೂಚ್ಯಂಕ(ಜಿಪಿಐ) ಸಂಸ್ಥೆ ನಡೆಸಿದ ಸಮೀಕ್ಷಾ ವರದಿಯಲ್ಲಿ ಆಘಾತಕಾರಿ ಅಂಶಗಳು ಬಹಿರಂಗಗೊಂಡಿದ್ದು, ಹಿಂಸಾತ್ಮಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಜಿಪಿಐ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಸಂಭವಿಸುವ ಹಿಂಸಾಚಾರ ಕೃತ್ಯಗಳ ಆಧಾರದ ಮೇಲೆ ಅತೀ ಹೆಚ್ಚು ಹಿಂಸಾ ಕೃತ್ಯಗಳು ನಡೆಯುವ ರಾಷ್ಟ್ರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಂತೆ ಜಿಪಿಐ 2013ನೇ ಸಾಲಿನಲ್ಲಿ ಒಟ್ಟು 161 ರಾಷ್ಟ್ರಗಳನ್ನು ಗಣನೆಗೆ ತೆಗೆದುಕೊಂಡು ಸಮೀಕ್ಷೆ ನಡೆಸಿತ್ತು. ಅದರಲ್ಲಿ ಭಾರತ 141 ಸ್ಥಾನ ಪಡೆದಿದ್ದು, 2012ರಲ್ಲಿ ಒಟ್ಟು 799 ಮಂದಿ ಹಿಂಸಾಚಾರ ಕೃತ್ಯಗಳಿಂದಾಗಿ ಮೃತಪಟ್ಟಿದ್ದಾರೆ. ಪ್ರತಿ ದಿನ ಇಬ್ಬರಂತೆ ಹಿಂಸಾಚಾರಕ್ಕೆ ಬಲಿಯಾಗುತ್ತಾರೆ ಎಂಬ ಆಘಾತಕಾರಿ ಮಾಹಿತಿ ಜಿಪಿಐನ ಸಮೀಕ್ಷೆಯಿಂದ ತಿಳಿದುಬಂದಿದೆ.
ಜಿಪಿಐನ 2013ನೇ ಸಾಲಿನ ಸಮೀಕ್ಷೆಯಲ್ಲಿ ಮಧ್ಯ ಆಫ್ರಿಕಾ ಗಣರಾಜ್ಯ ಹಿಂಸಾಚಾರ ಕೃತ್ಯಗಳಲ್ಲಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳನ್ನು ಪಾಕಿಸ್ತಾನ, ಇರಾಕ್, ಆಫ್ಘಾನಿಸ್ತಾನ ಹಾಗೂ ದಕ್ಷಿಣ ಸುಡಾನ್ ಪಡೆದಿವೆ. ಹಿಂಸಾಚಾರ ಕೃತ್ಯಗಳಲ್ಲಿ ಭಾರತ 20ನೇ ಸ್ಥಾನದಲ್ಲಿದೆ. ಶಾಂತಿಯುತ ಹಾಗೂ ಸುಭದ್ರ ರಾಷ್ಟ್ರಗಳ ಪಟ್ಟಿಯಲ್ಲಿ ಐಸ್ಲ್ಯಾಂಡ್ ಪ್ರಥಮ ಸ್ಥಾನದಲ್ಲಿದೆ.
ಜಿಪಿಐ ಸಂಸ್ಥೆ ಪ್ರತಿ ವರ್ಷ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಲ್ಲಿ ಯಾವ ದೇಶಗಳು ಶಾಂತಿಯುತ ಜೀವನಕ್ಕೆ ಯೋಗ್ಯವಾಗಿವೆ ಎಂಬ ಅಂಶಗಳನ್ನು ಪ್ರಧಾನವಾಗಿಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮೀಕ್ಷೆ ನಡೆಸುತ್ತಿದೆ.